ಅರಕಲಗೂಡು (ಹಾಸನ): ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಹಾಸನ ಜಿಲ್ಲಾ ಬಿಎಸ್ಪಿ ಪಕ್ಷದ ಜಿಲ್ಲಾಧ್ಯಕ್ಷ ಅತ್ನಿ ಹರೀಶ್, ಅರಕಲಗೂಡು ಸಾರಿಗೆ ನೌಕರರ ಒಕ್ಕೂಟದ ತಾಲೂಕು ಮುಖಂಡ ಹರೀಶ್ ಕುಮಾರ್ ಮತ್ತು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಸಾರಿಗೆ ನೌಕರರು ಮತ್ತು ಕುಟುಂಬ ವರ್ಗದವರು ಸೇರಿ ಸಾರಿಗೆ ನೌಕರರ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸುವಂತೆ ಅಗ್ರಹಿಸಿ ಶಾಸಕರಾದ ಎ.ಟಿ.ರಾಮಸ್ವಾಮಿಗೆ ಮನವಿ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ಸರ್ಕಾರ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿ ಮಾತಿಗೆ ತಪ್ಪಿದೆ. ಸರ್ಕಾರ ಇದನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಆದರೆ ಸರ್ಕಾರ ಸರ್ವಾಧಿಕಾರ ಧೋರಣೆ ನಡೆಸುತ್ತಿದೆ. ಬಲವಂತವಾಗಿ ಕರ್ತವ್ಯಕ್ಕೆ ಬರಲು ಒತ್ತಡ ಹೇರುವುದು ಪ್ರಜಾಸತ್ತಾತ್ಮಕ ಕ್ರಮ ಅಲ್ಲ. ಸಾರಿಗೆ ನೌಕರರನ್ನು ಹೆದರಿಸುವುದು, ಬೆದರಿಸುವುದು, ಸರಿಯಾದ ನಿಯಮ ಅಲ್ಲ. ನೌಕರರ ವರ್ಗಾವಣೆ, ವಜಾ ಮಾಡುವುದು, ಅಮಾನತು ಮಾಡುತ್ತಿರುವ ಕ್ರಮವನ್ನು ಕಟುವಾಗಿ ಖಂಡಿಸುತ್ತೇನೆ ಎಂದು ಹೇಳಿದರು.
ನಿಮ್ಮಿಂದ ನಾನು, ನಾನು ನಿಮ್ಮ ಜೊತೆ, ನಿಮ್ಮ ಸಂಘಟನೆ ಜೊತೆ ಇರುತ್ತೇನೆ. ಸಾರಿಗೆ ಮಂತ್ರಿ ಮತ್ತು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ನಿಮ್ಮ ಹಠಮಾರಿತನದ ಧೋರಣೆ ಬಿಡಿ, ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿ ಎಂದು ಕೇಳುತ್ತೇನೆ ಎಂದರು.