ಹಾಸನ: ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ಸಹಕಾರ ಸಂಘದ ನಿರ್ದೇಶಕರಾದ ಪಾಪಣ್ಣಿ, ಜಿಲ್ಲೆಯ ಸಹಕಾರ ಸಂಘವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಡಿ ಆರ್ ಶಿವಣ್ಣ ಆರೋಪಿಸಿದ್ದಾರೆ.
ದೊಡ್ಡಕಾಡನೂರು ಗ್ರಾಮದ ಪ್ರಾಥಮಿಕ ಸಹಕಾರ ಸಂಘದ ಕಚೇರಿ ಎದುರು ಬಿಜೆಪಿ ಮುಖಂಡರು ಮತ್ತು ರೈತರು ಪ್ರತಿಭಟಿಸುವ ವೇಳೆ ಮಾತನಾಡಿದ ಅವರು, ದೊಡ್ಡಕಾಡನೂರು ಸಹಕಾರ ಸಂಘವು ನಗರಹಳ್ಳಿ, ಶ್ರವಣೂರು ಮತ್ತು ಕಡಾನೂರು ಪಂಚಾಯ್ತಿ ವ್ಯಾಪ್ತಿಗೆ ಬರುತ್ತದೆ. ಮಾಜಿ ಶಾಸಕರಾದ ಎ ದೊಡ್ಡೆಗೌಡರ ಕಾಲದಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಶೇರನ್ನು ಗ್ರಾಮಸ್ಥರಿಂದ ಕಟ್ಟಿಸಿಕೊಂಡು ಸಂಘವನ್ನು ಸ್ಥಾಪಿಸಿಕೊಂಡಿದ್ದೆವು. ಈ ಎರಡು ವರ್ಷಗಳಿಂದ ಶೇರನ್ನು ಕಟ್ಟಿಸಿಕೊಳ್ಳಿ ಎಂದು ಹೇಳಿದರೆ ಕೇಳುತ್ತಿಲ್ಲ. ರೈತರಿಗೆ ಸಾಲ ಕೊಡುವ ನೆಪದಲ್ಲಿ ಚೆಕ್ ಕೊಡದೆ ನಗದು ಕೊಟ್ಟಿದ್ದಾರೆ. ನಮ್ಮ ನಿರ್ದೇಶಕರನ್ನು ಯಾವುದೇ ಸಂಘದ ಸಭೆಗೆ ಕರೆಯದೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷ ಮತ್ತು ಬಿಜೆಪಿ ಮುಖಂಡ ಷಾಂಬಶಿವಪ್ಪ, ರೈತ ಮುಖಂಡ ಗಣೇಶ್, ಕಾಡನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಾಂತಣ್ಣ ಹಾಗೂ ಬಿಜೆಪಿ ರೈತ ಮುಖಂಡರು ಉಪಸ್ಥಿತರಿದ್ದರು.