ಹಾಸನ: ಬಾಲಕಿ ಮೇಲೆ ದುರುಳರು ಅಟ್ಟಹಾಸ ಮೆರೆದಿದ್ದು, ಗರ್ಭಿಣಿಯಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ನಡೆದಿದ್ದು, ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೇ ಘಟನೆಯಲ್ಲಿ ಬಾಲಕರು ಭಾಗಿಯಾಗಿದ್ದು, ಅವರ ಹೆಸರನ್ನು ಪ್ರಸ್ತಾಪಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ಹೇಳಿದ್ದಾರೆ.
ಬಾಲಕಿಯ ಪೋಷಕರು ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕೆಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿದ್ದಾರೆ. ಈ ಪ್ರಕರಣದಲ್ಲಿ ಕಾಫಿ ತೋಟದ ಮಾಲೀಕರ ಕೈವಾಡ ಇದೆಯೇ ಎಂಬ ತನಿಖೆ ಕೂಡ ಮಾಡಲಾಗುತ್ತಿದೆ.
ಅಪ್ರಾಪ್ತೆಯನ್ನು ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಆಶ್ರಯದಲ್ಲಿ ರಕ್ಷಣೆ ಮಾಡಲಾಗಿದ್ದು, ಅಪ್ರಾಪ್ತ ಆರೋಪಿಗಳನ್ನು ಬಾಲಮಂದಿರಕ್ಕೆ ಕಳುಹಿಸಿ ಕೊಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆರು ತಿಂಗಳ ಬಳಿಕ ಈ ಘಟನೆ ಬೆಳಕಿಗೆ ಬಂದಿದ್ದು, ಅಪ್ರಾಪ್ತ ಬಾಲಕಿ ನೀಡಿರುವ ಹೇಳಿಕೆ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಇನ್ನುಳಿದವರ ತನಿಖೆ ನಡೆಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮುಧೋಳ ಕೊಲೆ ಕೇಸ್: ತಂದೆಯನ್ನು ಕೊಂದು ನಾಲ್ಕು ದಿನದ ಬಳಿಕ ವಿಷಯ ತಿಳಿಸಿದ ಪುತ್ರ