ಅರಕಲಗೂಡು (ಹಾಸನ): ಕೈಗೆ ಸಿಗದಿರುವ ದ್ರಾಕ್ಷಿ ಯಾವತ್ತೂ ಹುಳೀನೆ, ಅಧಿಕಾರ ಸಿಗದಿದ್ದಾಗ ಪ್ರತಿ ಪಕ್ಷದವರು ಏನು ಬೇಕಾದರೂ ಮಾತಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟಾಂಗ್ ನೀಡಿದರು.
ಅರಕಲಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜನಾಶೀರ್ವಾದ ಕಾರ್ಯಕ್ರಮದ ನಿಮಿತ್ತ ಪ್ರವಾಸ ಹಮ್ಮಿಕೊಂಡಿದ್ದ ಕರಂದ್ಲಾಜೆ, ಸರ್ಕಾರ ಟೇಕಾಫ್ ಆಗಲ್ಲ ಮತ್ತು ಅಧಿಕಾರವನ್ನು ಪೂರ್ಣಗೊಳಿಸುವುದೂ ಇಲ್ಲ ಎಂಬ ಸಿದ್ದರಾಮಯ್ಯ ಮಾತಿಗೆ ಪ್ರತ್ಯುತ್ತರ ನೀಡಿದರು.
ಸಿದ್ದರಾಮಯ್ಯನವರಿಗೆ ಈಗ ಅಧಿಕಾರ ಕೈಗೆ ಸಿಗದಿರುವ ದ್ರಾಕ್ಷಿಯಂತಾಗಿದೆ. ಅವರ ಪಕ್ಷ ಅಧಿಕಾರದಲ್ಲಿದ್ದಾಗ ಏನೇನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀಡಿದ ಹಣವನ್ನು ಬಳಸಿಕೊಂಡು, ಕೇಂದ್ರದ ಯೋಜನೆಗಳಿಗೆ 'ಭಾಗ್ಯ' ಎಂದು ನಾಮಕರಣ ಮಾಡಿ ರಾಜ್ಯಕ್ಕೆ ಕೊಡುಗೆಗಳನ್ನು ನೀಡಿದವರು ಎಂದು ಟೀಕಿಸಿದರು.
ಇದನ್ನೂ ಓದಿ: ಈ ಸರ್ಕಾರ ಅವಧಿ ಪೂರ್ಣಗೊಳಿಸುವುದು ಡೌಟ್: ಸಿದ್ದರಾಮಯ್ಯ
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಅನ್ಯಾಯವಾಗುವುದಿಲ್ಲ, ಅವರಿಗೆ ಬಿಡಬೇಕಾದ ನೀರನ್ನು ಬಿಡುತ್ತೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವರೊಂದಿಗೆ ಮಾತುಕತೆ ನಡೆಸಿ ಯೋಜನೆ ಮಾಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕೃಷಿ ಕಾಯ್ದೆಯನ್ನು ವಿರೋಧಿಸುತ್ತಿರುವವರು ರೈತರಲ್ಲ, ಅವರು ದಲ್ಲಾಳಿಗಳು. ಅವರು ಇಷ್ಟು ದಿನ ರೈತರ ರಕ್ತ ಹೀರುತ್ತಿದ್ದರು. ಅದಕ್ಕೆ ನಮ್ಮ ಸರ್ಕಾರ ಕಾಯ್ದೆ ತಂದು ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಇದರಿಂದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮುಕ್ತವಾಗಿ ಮಾರಾಟ ಮಾಡಬಹುದು. ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು ಎಂದರು.