ಸಕಲೇಶಪುರ: 2021ರ ಮಾರ್ಚ್ ಅಥವಾ ಏಪ್ರಿಲ್ ತಿಂಗಳೊಳಗೆ ಸಕಲೇಶಪುರ ಭಾಗದ ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಮುಗಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಹೇಳಿದರು.
ತಾಲೂಕಿನ ಕಪ್ಪಳ್ಳಿ ಸಮೀಪ ಎತ್ತಿನ ಹೊಳೆ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿ, ನಾನು ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾದ ಹಿನ್ನೆಲೆಯಲ್ಲಿ ಖುದ್ದು ಬಂದು ಎತ್ತಿನಹೊಳೆ ಯೋಜನೆಯ ಕಾಮಗಾರಿ ಪರಿಶೀಲನೆ ಮಾಡುತ್ತಿದ್ದೇನೆ. ಮಳೆಗಾಲದ ಮೂರು ತಿಂಗಳಲ್ಲಿ ಸುಮಾರು 24 ಟಿ.ಎಂ.ಸಿ ನೀರು ದೊರಕುವ ನಿರೀಕ್ಷೆಯಿದೆ.
ಕೊರೊನಾ ಹಿನ್ನೆಲೆಯಲ್ಲಿ ಹೊರ ರಾಜ್ಯದ ಕಾರ್ಮಿಕರು ತವರು ರಾಜ್ಯಗಳಿಗೆ ಹೋಗಿರುವ ಕಾರಣ ಕಾಮಗಾರಿ ತುಸು ವಿಳಂಬವಾಗುತ್ತಿದೆ. ಭೂಸ್ವಾಧೀನ ಪ್ರಕ್ರಿಯೆ ಯಲ್ಲಿರುವ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲಾಗುತ್ತದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಸೇರಿದಂತೆ ಇತರೆ ಬಯಲುಸೀಮೆ ಪ್ರದೇಶಗಳಿಗೆ ನೀರು ಪೂರೈಸುವ ಮಹತ್ವದ ಯೋಜನೆ ಇದಾಗಿರುವುದರಿಂದ ಸಾವಿರಾರು ಗ್ರಾಮಗಳಿಗೆ ಹಾಗೂ ಲಕ್ಷಾಂತರ ಜನಕ್ಕೆ ಯೋಜನೆಯಿಂದ ಉಪಯೋಗವಾಗುತ್ತದೆ ಎಂದರು.
ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಈ ಹಿಂದೆ ಇಂದಿನ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಈ ಯೋಜನೆಗೆ ವಿರೋಧಿಸಿದರಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಳೆಗಾಲದ 3 ತಿಂಗಳಲ್ಲಿ ಸಮುದ್ರಕ್ಕೆ ವ್ಯರ್ಥವಾಗಿ ಹರಿಯುವ ನೀರನ್ನು ಮಾತ್ರ ಯೋಜನಗೆ ಬಳಸಿಕೊಳ್ಳಲಾಗುತ್ತದೆ. ಈಗಾಗಲೇ ಕೋಟ್ಯಂತರ ರೂಪಾಯಿಯನ್ನು ಯೋಜನೆಗಾಗಿ ವಿನಿಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಲು ಆದ್ಯತೆ ನೀಡುತ್ತೇನೆ ಎಂದು ತಿಳಿಸಿದರು.
ಒಟ್ಟು 8 ಚೆಕ್ ಡ್ಯಾಮ್ಗಳ ನಿರ್ಮಾಣಕ್ಕೆ ಯೋಜಿಸಲಾಗಿದ್ದು, ಯಾವುದರ ಕಾಮಗಾರಿ ಆರಂಭಿಸಿಲ್ಲವೋ ಶೀಘ್ರವಾಗಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಯೋಜನೆ ಪ್ರಾರಂಭದಲ್ಲಿ ಸುಮಾರು 12000 ಕೋಟಿ ವೆಚ್ಚದಲ್ಲಿ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಇದೀಗ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಯೋಜನೆಯ ವೆಚ್ಚ ಹೆಚ್ಚಾಗುತ್ತಿದೆ. ಮಲೆನಾಡು ಭಾಗದ ರಸ್ತೆಗಳ ಅಭಿವೃದ್ಧಿಗೆ ಮತ್ತಷ್ಟು ಹಣ ಬಿಡುಗಡೆಗಾಗಿ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರಿಗೆ ಒತ್ತಾಯ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅರ್.ಗಿರೀಶ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್ ಸೇರಿದಂತೆ ಹಲವರಿದ್ದರು.