ಹಾಸನ: ಕೋವಿಡ್ ಹಿನ್ನೆಲೆ ಈ ವರ್ಷ ಹಾಸನಾಂಬೆ ಉತ್ಸವ ಸರಳವಾಗಿ ನಡೆಯಲಿದೆ. ಎಲ್ಲಾ ಭಕ್ತಾಧಿಗಳು ಸರಳ ಉತ್ಸವಕ್ಕೆ ಅವಕಾಶ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ವಿನಂತಿ ಮಾಡಿದರು.
ಸಿಎಂ ಬದಲಾವಣೆ ಕುರಿತ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಇನ್ನೂ ಮೂರು ವರ್ಷ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ಎರಡೂ ಉಪ ಚುನಾವಣೆಗಳೂ ಕೂಡ ಸಿಎಂ ಯಡಿಯೂರಪ್ಪ ನಾಯಕತ್ವದಲ್ಲಿ ನಡೆಯುತ್ತಿವೆ ಎಂದು ಕೆ.ಗೋಪಾಲಯ್ಯ ತಿರುಗೇಟು ನೀಡಿದರು.
ಹಾಸನ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇಂದಿನಿಂದ ಆರಂಭವಾಗಿದೆ. ಅಲ್ಲಿ ರಸ್ತೆ ಗುಂಡಿ ಬಿದ್ದು ಹಾಳಾಗಿರುವುದು ಅದು ನನ್ನ ಗಮನಕ್ಕೆ ಬಂದಿದೆ. ಹೊಸದಾಗಿ ಡಾಂಬರೀಕರಣ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಸಕಲೇಶಪುರ, ಆಲೂರು ತಾಲೂಕುಗಳಲ್ಲಿ ಕಾಫಿ ಹಾಗೂ ಮೆಕ್ಕೆಜೋಳ ಬೆಳೆಗಾರರಿಗೆ ಮಳೆಯಿಂದ ನಷ್ಟವಾದ ಹಿನ್ನೆಲೆ ಈಗಾಗಲೇ ಅಧಿಕಾರಿಗಳಿಂದ ಮಾಹಿತಿ ತೆಗೆದುಕೊಂಡಿದ್ದೇನೆ.
ಆನ್ಲೈನ್ ಮೂಲಕ ನಷ್ಟದ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ರು. ಕನ್ನಡದ ಮೊದಲ ಶಿಲಾ ಶಾಸನ ಪತ್ತೆಯಾದ ಹಲ್ಮಿಡಿಗೆ ಮೂಲಸೌಕರ್ಯ ಕೊರತೆ ವಿಚಾರ ಪ್ರತಿಕ್ರಿಯೆ ನೀಡಿದ ಸಚಿವರು, ಶೀಘ್ರವೇ ಹಲ್ಮಿಡಿ ಗ್ರಾಮಕ್ಕೆ ಕುಡಿಯುವ ನೀರು, ಶೌಚಾಲಯ,ರಸ್ತೆ ನಿರ್ಮಾಣ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿ ಹೇಳಿದ್ರು.