ಸಕಲೇಶಪುರ: ತಹಶೀಲ್ದಾರ್ ಹಾಗೂ ಕಾರ್ಮಿಕ ಇಲಾಖೆ ಅಧೀಕ್ಷಕರ ನೇತೃತ್ವದಲ್ಲಿ ಹೊರ ಜಿಲ್ಲೆಗಳ ವಲಸೆ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಕಳುಹಿಸುವ ಕಾರ್ಯಕ್ಕೆ ಮಂಗಳವಾರ ರಾತ್ರಿ ಚಾಲನೆ ನೀಡಲಾಯಿತು.
ಪಟ್ಟಣದಲ್ಲಿ ವಲಸೆ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಕಳುಹಿಸುವ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ತಹಶೀಲ್ದಾರ್ ಮಂಜುನಾಥ್ ಅವರು, ಬಂಧಿಹಳ್ಳಿ ಗ್ರಾಮದ ಕಾಫಿ ಎಸ್ಟೇಟ್ವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಾಮರಾಜನಗರ ಜಿಲ್ಲೆಯ 29 ಜನ, ಅಗಲಟ್ಟಿಯ ಕಾಫಿ ತೋಟವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಾವೇರಿ ಜಿಲ್ಲೆಯ 19 ಜನ, ಹೊನ್ನಾಪುರ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ದಾವಣಗೆರೆ ಜಿಲ್ಲೆಯ 14 ಜನ ವಲಸೆ ಕಾರ್ಮಿಕರ ಆರೋಗ್ಯವನ್ನು ತಪಾಸಣೆ ಮಾಡಿಸಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಅವರ ಸ್ವಂತ ಊರುಗಳಿಗೆ ಕಳುಹಿಸಲಾಗಿದೆ.
ಕೂಲಿ ಕಾರ್ಮಿಕರನ್ನು ಕರೆ ತಂದ ಮಾಲೀಕರೆ ಸಾರಿಗೆ ವೆಚ್ಚ ಭರಿಸಿದ್ದಾರೆ. ಮುಂದಿನ ದಿನಗಳಲ್ಲಿ ಊರಿಗೆ ಹೋಗಲು ಇಚ್ಛಿಸುವ ಮತ್ತಷ್ಟು ಕೂಲಿ ಕಾರ್ಮಿಕರನ್ನು ಕಳುಹಿಸಿಕೊಡಲಾಗುವುದು. ಸದ್ಯಕ್ಕೆ ಹಸಿರು ವಲಯದಲ್ಲಿರುವ ಜಿಲ್ಲೆಗಳಿಗೆ ಮಾತ್ರ ಕಾರ್ಮಿಕರನ್ನು ಕಳುಹಿಸಲಾಗಿದೆ. ಮಳಲಿ ರಸ್ತೆ ಬದಿಯ ಕೂಲಿ ಕಾರ್ಮಿಕರು ತುಮಕೂರು ಮೂಲದವರಾಗಿದ್ದಾರೆ. ಆದರೆ, ತುಮಕೂರು ಕೆಂಪು ವಲಯದಲ್ಲಿರುವುದರಿಂದ ಅವರನ್ನು ಕಳುಹಿಸಲಾಗಿಲ್ಲ.
ಗ್ರೀನ್ ಝೋನ್ನಲ್ಲಿರುವ ಜಿಲ್ಲೆಗಳಿಗೆ ಮಾತ್ರ ವಲಸೆ ಕಾರ್ಮಿಕರನ್ನು ಕಳುಹಿಸುವ ವ್ಯವಸ್ಥೆ ಇದೆ. ವಲಸೆ ಕಾರ್ಮಿಕರನ್ನು ಯಾರಾದರೂ ಕಳುಹಿಸಬೇಕಾದರೆ ತಾಲೂಕು ಕಚೇರಿಗೆ ಸಂಪರ್ಕಿಸಬೇಕೆಂದು ಹೇಳಿದರು. ವಲಸೆ ಕಾರ್ಮಿಕರ ಸಮಸ್ಯೆ ಕುರಿತು ಈಟಿವಿ ಭಾರತ್ ವರದಿ ಮಾಡಿದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಸ್ಪಂದಿಸಿದೆ. ಈ ಸಂದರ್ಭದಲ್ಲಿ ಕಾರ್ಮಿಕ ಅಧೀಕ್ಷಕರಾದ ಅಕ್ಬರ್ ಮುಲ್ಲಾ, ಕಸಬಾ ಹೋಬಳಿ ಕಂದಾಯ ಅಧೀಕ್ಷಕ ಮಂಜುನಾಥ್, ಬೆಳಗೋಡು ಹೋಬಳಿ ಕಂದಾಯ ಅಧೀಕ್ಷಕ ಜನಾರ್ಧನ್ ಸೇರಿ ಇನ್ನಿತರರು ಹಾಜರಿದ್ದರು.