ಅರಸೀಕೆರೆ: ತಾಲೂಕಿನಲ್ಲಿ ಗಾಂಜಾ ದಂಧೆ ಭಾರೀ ಸದ್ದು ಮಾಡುತ್ತಿದ್ದು, ತಿಂಗಳಲ್ಲಿ ತಾಲೂಕಿನಲ್ಲಿಯೇ 4 ಪ್ರಕರಣಗಳು ದಾಖಲಾಗಿವೆ. ದಂಧೆಕೋರರ ಬೆನ್ನತ್ತಿರುವ ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.



ಸಂಜೆ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಅರಸೀಕೆರೆಯ ಜೆ.ಸಿ.ಪುರ ರಸ್ತೆ ಸಮೀಪವಿರುವ ಜ್ಯೋತಿ ಡಾಬಾದ ಮುಂಭಾಗದಲ್ಲಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದ ಶ್ರೀಪತಿ (20) ಮತ್ತು ರವಿಕುಮಾರ್ (28) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ಅರ್ಧ ಕೆಜಿಯಷ್ಟು ಗಾಂಜಾ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇತ್ತೀಚೆಗೆ ರಾಜ್ಯಮಟ್ಟದಲ್ಲಿ ಮಾದಕ ವಸ್ತುಗಳ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಅಬಕಾರಿ ಉಪಾಯುಕ್ತ ಗೋಪಾಲಾಕೃಷ್ಣೆಗೌಡ ಹಾಗೂ ಉಪ ಅಧೀಕ್ಷಕ ಹೆಚ್.ಎಂ.ರಘು ಮಾರ್ಗದರ್ಶನದಂತೆ ಕಾರ್ಯಪ್ರವೃತ್ತರಾಗಿ ಮಾದಕ ವಸ್ತುಗಳ ದಂಧೆಯ ಬೆನ್ನತ್ತಿದ ಅರಸೀಕೆರೆ ಅಬಕಾರಿ ನಿರೀಕ್ಷಕ ಎಂ.ಸಿ.ಶಂಕರ್, ಉಪ ನಿರೀಕ್ಷಕ ಜಯಕುಮಾರ್, ರೂಪಾಬಾಯಿ ಹಾಗೂ ಸಿಬ್ಬಂದಿ ತೋಟದೇಶ್, ರಂಜಿತಾ, ಆಕಾಶ್, ಸೋಮಶೇಖರ್ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅರಸೀಕೆರೆ ನಗರ ಹಾಗೂ ಗ್ರಾಮಾಂತರ ಹಾಗೂ ಬಾಣಾವರ ಠಾಣೆ ಸೇರಿದಂತೆ ಇದು ತಿಂಗಳೊಂದರಲ್ಲಿ ದಾಖಲಾದ 4ನೇ ಪ್ರಕರಣವಾಗಿದೆ.