ಹಾಸನ : ಕೊರೊನಾ ಸಂಕಷ್ಟದ ದಿನಗಳಲ್ಲಿ ಕೆಲಸವಿಲ್ಲದೆ ಕಂಗಾಲಾಗಿದ್ದ ವಿದ್ಯಾವಂತ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಈ ಕಾರ್ಯಕ್ರಮದಿಂದ ನಿರುದ್ಯೋಗಿಗಳ ಭವಿಷ್ಯ ಉಜ್ವಲವಾಗಿ ಬೆಳಗಲಿ ಎಂದು ಶ್ರವಣಬೆಳಗೊಳ ಜೈನ್‌ಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಪಟ್ಟಣದ ಪೊಲೀಸ್ ಸಮುದಾಯ ಭವನದಲ್ಲಿ ಮನೋಹರ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾವಂತರಿಗೆ ಉದ್ಯೋಗ ಇಲ್ಲದಿರುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸಮಾಜದಲ್ಲಿ ನಿರುದ್ಯೋಗದ ಸಮಸ್ಯೆ ತಾಂಡವಾಡುತ್ತಿದೆ. ಸ್ಥಳೀಯ ಮತ್ತು ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಅವಕಾಶ ನೀಡುವುದು ನಿಜಕ್ಕೂ ಶ್ಲಾಘನೀಯ ಕೆಲಸ. ಇದರಿಂದ ಉದ್ಯೋಗ ಅರಸಿ ವಲಸೆ ಹೋಗುವ ಆವಶ್ಯಕತೆ ಈ ಕಾರ್ಯಕ್ರಮದ ಮೂಲಕ ತಪ್ಪಿದೆ ಎಂದರು.
ಮನೋಹರ ಸೇವಾ ಪ್ರತಿಷ್ಠಾನದ ಮೂಲಕ ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಭಾಗದಲ್ಲಿಯೇ ಉಳಿದುಕೊಂಡಿದ್ದ ನಿರುದ್ಯೋಗಿಗಳಿಗೆ ಉದ್ಯೋಗ ಮೇಳ ಮಾಡುವ ಮೂಲಕ ಸಂಸ್ಥೆ ಆಶಾಕಿರಣವಾಗಿದೆ. ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನ ಜಯನಗರದಲ್ಲಿ 3ರಿಂದ 6 ತಿಂಗಳು ತರಬೇತಿ ನೀಡಿ ರಾಜ್ಯದ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಕಲ್ಪಿಸಿಕೊಡಲಾಗುತ್ತಂತೆ.
ಅದರಲ್ಲೂ ಇಂದು ಆಯ್ಕೆಯಾದ ಬಹುತೇಕ ಮಂದಿಯನ್ನ ಬೆಂಗಳೂರು, ಮಂಗಳೂರು, ಹಾಸನ, ತುಮಕೂರು ಮೈಸೂರಿನಲ್ಲಿರುವ ಅಪೋಲೊ, ಮಣಿಪಾಲ್, ಕೊಲೊಂಬಿಯಾ ಏಷಿಯಾ, ಫೋರ್ಟಿಸ್ ಹಾಗೂ ಹೆಚ್ಎಸ್ಜಿ ಆಸ್ಪತ್ರೆಗೆ ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ಮಾಡಲಾಗುತ್ತದೆ.
ಉದ್ಯೋಗ ಇಲ್ಲದೆ ಬದುಕು ನಿರ್ವಹಣೆ ಸಾಧ್ಯವಿಲ್ಲ. ಕೋವಿಡ್ ಸಂದರ್ಭದಲ್ಲಿ ಉದ್ಯೋಗಕ್ಕಾಗಿ ಅಲೆದಾಡಿದ ಅದೆಷ್ಟೋ ದಿನಗಳಿವೆ. ಆದ್ರೆ, ಇಂತಹ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎನ್ನುವುದು ಆಯ್ಕೆಯಾದ ಅಭ್ಯರ್ಥಿಗಳ ಮಾತು.