ಹಾಸನ: ಸಿಕ್ಕಸಿಕ್ಕವರಿಗೆಲ್ಲಾ ಸುಖಾಸುಮ್ಮನೆ ಬಯ್ಯುತ್ತಿದ್ದ. ಹೀಗಾಗಿ ಕೆಲವರು ಈತನ ಗ್ರಾಮಕ್ಕೆ ಹೋಗಿ ಬುದ್ಧಿವಾದ ಹೇಳಿ ಬಂದಿದ್ದರು. ಆದರೆ, ಅದನ್ನೇ ತಪ್ಪಾಗಿ ತಿಳಿದುಕೊಂಡು ನಮ್ಮ ಊರಿಗೆ ಬಂದು ಬೆದರಿಕೆ ಹಾಕುತ್ತೀರಾ ಅಂತ ಸಿಟ್ಟಿಗೆದ್ದು ಕುಡಿದ ಅಮಲಿನಲ್ಲಿ ಅವರ ಮೇಲೆ ಕಾರು ಹತ್ತಿಸಿ ಒಬ್ಬನನ್ನ ಕೊಲೆ ಮಾಡಿ 6 ಮಂದಿಗೆ ಗಂಭೀರವಾಗಿ ಗಾಯ ಮಾಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಚನ್ನರಾಯಪಟ್ಟಣ ತಾಲೂಕಿನ ಹೊಂಗೆಹಳ್ಳಿಯ ನವೀನ್ (32) ಕೊಲೆ ಮಾಡಿರುವ ಆರೋಪಿ, ನಂದೀಶ್ (48) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ. ಬಾಗೂರು ಹೋಬಳಿ ಎಂ ಶಿವರ ಗ್ರಾಮದ ಬಳಿ ಮೃತ ನಂದೀಶ್ ಹಾಗೂ ಸ್ನೇಹಿತರು ನಿಂತಿದ್ದ ಸಂದರ್ಭದಲ್ಲಿ ಕಾರು ಚಲಾಯಿಸಿಕೊಂಡು ಬಂದ ನವೀನ್ ಅವರ ಮೇಲೆ ಕಾರು ಹತ್ತಿಸಿ ಅವರನ್ನು ಕೊಲೆ ಮಾಡಿದ್ದಾನೆ. ಇನ್ನುಳಿದ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುಡಿದ ಅಮಲಿನಲ್ಲಿ ಸಿಕ್ಕ ಸಿಕ್ಕವರಿಗೆ ನವೀನ್ ಬೈಯ್ತಿದ್ದ. ಈ ವೇಳೆ, ಸುಮ್ಮನೆ ಊರಿಗೆ ಹೋಗು ಎಂದು ನಂದೀಶ್ ಮತ್ತು ಗೆಳೆಯರು ಬುದ್ಧಿ ಹೇಳಿದ್ದರು. ಈ ವೇಳೆ, ಕಾರ್ ಏರಿ ವಾಪಸ್ ಹೋಗಿ, ಮತ್ತೆ ತಿರುಗಿ ಬಂದು ಪ್ರತೀಕಾರವಾಗಿ ಕಾರ್ ಹತ್ತಿಸಿ, ಒಬ್ಬರ ಸಾವಿಗೆ ಕಾರಣವಾಗಿದ್ದಾನೆ.
ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಹಂತಕ ನವೀನನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.