ಹಾಸನ: ಮೊದಲನೇ ಮದುವೆಯಾಗಿರುವ ವಿಷಯ ಮುಚ್ಚಿಟ್ಟು ಎರಡನೇ ವಿವಾಹಕ್ಕೆ ಸಿದ್ಧನಾಗಿದ್ದ ಖದೀಮನೊಬ್ಬ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.
ಬೆಂಗಳೂರಿನ ಮಧುಸೂದನ್ ಎರಡನೇ ಮದುವೆಯಾಗಲು ಬಂದು ಸಿಕ್ಕಿಬಿದ್ದ ಭೂಪ. ಈತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ನಾಲ್ಕು ವರ್ಷಗಳ ಹಿಂದೆ ಲಕ್ಷ್ಮಿ( ಹೆಸರು ಬದಲಾಯಿಸಲಾಗಿದೆ) ಎಂಬುವರನ್ನ ಮದುವೆಯಾಗಿದ್ದ. ಆದ್ರೆ, ಸಂಸಾರಿಕ ಜೀವನದಲ್ಲಿ ಉಂಟಾದ ಜಗಳದಿಂದ ಇಬ್ಬರು ದೂರವಾಗಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬ ಇತನಿಗೆ ಎರಡನೇ ಮದುವೆ ಮಾಡಲು ನಿರ್ಧರಿಸಿದ್ದು, ತನ್ನ ಸಹೋದರಿಯರ ಸಹಾಯದಿಂದ ಹಾಸನ ಮೂಲದ ಯುವತಿಯನ್ನು ಕೈ ಹಿಡಿಯಲು ಮುಂದಾಗಿದ್ದ.
ಮಧುಸೂದನ್ ಎರಡನೇ ಮದುವೆಯಾಗುತ್ತಿರುವುದು ಮೊದಲ ಪತ್ನಿಗೆ ತಿಳಿದ ಹಿನ್ನೆಲೆ ಆಕೆ ಸಾಮಾಜಿಕ ಜಾಲತಾಣಾಗಳ ಮೂಲಕ ಹಾಸನದ ವಿವಿಧ ಕಲ್ಯಾಣ ಮಂಟಪದ ದೂರವಾಣಿ ಸಂಖ್ಯೆ ಸಂಗ್ರಹಿಸಿ, ನನ್ನ ಪತಿ ಮೋಸದ ಮದುವೆಯಾಗುತ್ತಿದ್ದಾನೆ, ದಯಮಾಡಿ ಮದುವೆ ನಿಲ್ಲಿಸುವ ಮೂಲಕ ನನಗೆ ನ್ಯಾಯ ಕೊಡಿಸಬೇಕು ಅಂತ ಅಂಗಲಾಚಿದ್ದಾರೆ.
ಇದನ್ನೂ ಓದಿ: ಮದುವೆಯಾಗುವುದಾಗಿ ಮಹಿಳೆಗೆ ವಂಚನೆ: ಚಿನ್ನ, ನಗದು ಹೊತ್ತೊಯ್ದ ಕತರ್ನಾಕ್ ಖದೀಮ
ಅದರಂತೆ, ನಾಲ್ಕೈದು ಕಲ್ಯಾಣ ಮಂಟಪಗಳಿಗೆ ಕರೆ ಮಾಡಿ ಕೇಳಿದಾಗ ಹಾಸನದ ಎನ್ಸಿಇ ಕಲ್ಯಾಣ ಮಂಟಪದಲ್ಲಿ ಈತನ ಮದುವೆ ನಡೆಯುತ್ತಿರುವುದು ಗೊತ್ತಾಗಿ, ಕಲ್ಯಾಣ ಮಂಟಪದ ಮಾಲೀಕರಿಗೆ ವಿಚಾರ ಮುಟ್ಟಿಸಿದ್ದಾರೆ. ನಂತರ ಕಲ್ಯಾಣ ಮಂಟಪದ ಮಾಲೀಕರು ಯುವತಿ ಮನೆಯವರಿಗೆ ವಿಚಾರ ತಿಳಿಸಿದಾಗ, ಮದುಮಗನನ್ನು ರೂಮ್ನಲ್ಲಿ ಕೂಡಿಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ತನಿಖೆ ನಡೆಸಿದಾಗ ಮಧುಸೂದನ್ ಕಳ್ಳಾಟ ಬಯಲಾಗಿದೆ. ಆರೋಪಿ ಮಧುಸೂದನ್ ಮದುವೆಯಾದ ಮಾರನೇ ದಿನವೇ ಮಾಲ್ಡಿವ್ಸ್ಗೆ ಹೋಗಲು ಎರಡು ಟಿಕೆಟ್ ಬುಕ್ ಮಾಡಿ ಹನಿಮೂನ್ ಕನಸು ಕಂಡಿದ್ದ. ಆದರೆ ಆತನ ಕನಸೆಲ್ಲಾ ಭಗ್ನವಾಗಿದ್ದು, ಶ್ರೀಕೃಷ್ಣನ ಜನ್ಮಸ್ಥಾನದಲ್ಲಿ ಒಂಟಿಯಾಗಿ ಕುಳಿತಿದ್ದಾನೆ.
ಇದನ್ನೂ ಓದಿ: ಮೊದಲ ಪತ್ನಿಗೆ ವಂಚಿಸಿ 2ನೇ ಮದುವೆ: ಪೊಲೀಸ್ ಕಾನ್ಸ್ಟೇಬಲ್ ವಿರುದ್ಧ ದೂರು
'ನಾನು 4 ವರ್ಷದ ಹಿಂದೆ ಮದುವೆಯಾಗಿದ್ದೆ. ಆದರೆ ನನ್ನೊಂದಿಗೆ ಮೊದಲ ಪತ್ನಿ ಸಂಸಾರಿಕ ಜೀವನ ನಡೆಸುತ್ತಿಲ್ಲ. ಇಬ್ಬರು ದೂರವಾಗಿದ್ದೇವೆ. ನಮ್ಮ ಕುಟುಂಬದ ಯೋಗ ಕ್ಷೇಮ ವಿಚಾರಿಸಲು ಯಾರು ಇಲ್ಲದ ಕಾರಣ ನಾನು ಎರಡನೇ ಮದುವೆಯಾಗಲು ನಿರ್ಧರಿಸಿದೆ. ಆಕೆ ವಿಚ್ಛೇದನಕ್ಕೆ ಒಪ್ಪುತ್ತಿಲ್ಲ ಮತ್ತು ನನ್ನ ಜೊತೆ ಸಂಸಾರ ಮಾಡಲು ನಿರಾಕರಿಸಿದ್ದಾರೆ. ಹಾಗಾಗಿ ಈ ನಿರ್ಧಾರ ತೆಗೆದುಕೊಂಡೆ' ಎಂದು ಆರೋಪಿ ಮಧುಸೂದನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: ವಂಚಿಸಿ ಮೂವರೊಂದಿಗೆ ಮದುವೆ, ಮತಾಂತರಕ್ಕೆ ಬಲವಂತ; 7 ಮಕ್ಕಳ ತಂದೆಯ ಬಂಧನ