ಹಾಸನ: ಚನ್ನರಾಯಪಟ್ಟಣ ತಾಲೂಕಿನಲ್ಲಿ ಮಳೆಯಿಂದ ಹಾನಿಯಾಗಿರುವ ಶಾಲಾ ಕೊಠಡಿಗಳ ರಿಪೇರಿ ಮತ್ತು ನಿರ್ಮಾಣಕ್ಕೆ 5 ಕೋಟಿ ರೂ. ಹಣದ ಬೇಡಿಕೆಯಿದ್ದು, ನೆರೆ ಪರಿಹಾರದಡಿ ಒದಗಿಸುವಂತೆ ಜಿಲ್ಲಾಧಿಕಾರಿಗಳನ್ನು ಕೋರಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ತಿಳಿಸಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿ, ಮರುವನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಮಳೆಯಿಂದಾಗಿ ಎರಡು ಕೊಠಡಿಗಳು ಬಿದ್ದಿದ್ದವು. ಈ ಹಿನ್ನೆಲೆಯಲ್ಲಿ ಕೊರತೆಯಿದ್ದ ಎರಡು ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು, ಶಿಕ್ಷಣ ಇಲಾಖೆಯಡಿ 10.6 ಲಕ್ಷ, ನೆರೆ ಪರಿಹಾರದಡಿ 10.6 ಲಕ್ಷ ಮತ್ತು ತಮ್ಮ ಅನುದಾನದಡಿ 5 ಲಕ್ಷ ಸೇರಿ 26.2 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಮಕ್ಕಳಿಲ್ಲ ಎಂಬ ಕಾರಣದಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿ ಇರುವಾಗ ಉತ್ತಮ ದಾಖಲಾತಿ ಇರುವ ಇಲ್ಲಿನ ಶಾಲೆಯನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.
ಈ ಸಂದರ್ಭ ಅರಣ್ಯ ಇಲಾಖೆಯ ಹಸಿರು ಸಂತೆ ಯೋಜನೆಯಡಿ ಗ್ರಾಮಕ್ಕೆ ಮೂರು ಸಾವಿರ ಅರಣ್ಯ ಗಿಡಗಳನ್ನು ಉಚಿತವಾಗಿ ನೀಡುತ್ತಿದ್ದು, ಇದರ ಸಲುವಾಗಿ ಶಾಲಾ ಜಾಗದಲ್ಲಿ ಗಿಡ ನೆಟ್ಟು ಚಾಲನೆ ನೀಡಿ ರೈತರಿಗೆ ಗಿಡ ವಿತರಿಸಿದರು. ನಂತರ ಮತದಾನ ಜನಜಾಗೃತಿ ದಿನವಾದ ಇಂದು ಮತದಾನದಲ್ಲಿ ಎಲ್ಲರೂ ಭಾಗವಹಿಸುವಂತೆ ಅರಿವು ಮೂಡಿಸುವ ಜಾಥಾ ಹಮ್ಮಿಕೊಳ್ಳಲಾಗಿತ್ತು.