ಹಾಸನ: ವಾಹನಗಳ ನೋಂದಣಿ ಮತ್ತು ವಾಣಿಜ್ಯ ವಾಹನಗಳ ಎಫ್. ಸಿ. ಹಣಪಾವತಿ ಮಾಡಿಸಿಕೊಳ್ಳುವಾಗ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನಲೆ ಹಾಸನದ ಪ್ರಾದೇಶಿಕ ಸಾರಿಗೆ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆರ್ಟಿಓ ಕಚೇರಿಗೆ ಪ್ರತಿನಿತ್ಯ ಅಲೆದು ಅಲೆದು ಸಾಕಾಗಿದೆ, ಹಣ ಕೊಟ್ಟರೆ ಮಾತ್ರ ಎಲ್ಲಾ ಕೆಲಸ ಸಾರಾಸಗಟಾಗಿ ಆಗುತ್ತದೆ. ಚಾಲನಾ ಪರವಾನಿಗೆಯಿಂದ ಹಿಡಿದು ನೋಂದಣಿ, ಮರು ನೋಂದಣಿ ಮತ್ತು ವಾಹನಗಳ ವರ್ಗಾವಣೆ ಎಲ್ಲವನ್ನೂ ಹಣ ಕೊಟ್ಟ ಕ್ಷಣ ಮಾತ್ರದಲ್ಲಿ ಮಾಡಿಕೊಡುತ್ತಾರೆ. ಕಾನೂನು ಪ್ರಕಾರವಾಗಿ ಕೆಲಸ ಮಾಡಿಕೊಡಲು ಯಾರೊಬ್ಬರೂ ಸ್ಪಂದಿಸುವುದಿಲ್ಲ. ಕಚೇರಿ ಸಿಬ್ಬಂದಿ ದಯಾನಂದ್ ಮತ್ತು ಜಯಂತಿ ಪ್ರತಿನಿತ್ಯ ಹೆಚ್ಚುವರಿಯಾಗಿ ಹಣವನ್ನು ವಸೂಲಿ ಮಾಡುತ್ತಾರೆ ಎಂದು ನೊಂದ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಈ ಹಿನ್ನೆಲೆ ಹಾಸನದ ಲೋಕಾಯುಕ್ತ ಡಿವೈಎಸ್ಪಿ ಭಾನು ಮತ್ತು ಲೋಕಾಯುಕ್ತ ನಿರೀಕ್ಷಕ ಮಂಜುನಾಥ್ ಗೌಡ ನೇತೃತ್ವದಲ್ಲಿ ಆರ್ಟಿಓ ಕಚೇರಿ ಮೇಲೆ ದಾಳಿ ನಡೆಸಿ ಸುಮಾರು ಎರಡು ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದು, ಪ್ರಮುಖ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ.