ಹಾಸನ: ರಾಜ್ಯದಲ್ಲಿ ಏ.24 ರಿಂದ ಕಠಿಣ ಲಾಕ್ಡೌನ್ ಶುರುವಾದ ಹಿನ್ನೆಲೆ ಜಿಲ್ಲೆಯಲ್ಲಿ ಪೊಲೀಸರು ಪುಲ್ ರಸ್ತೆಯಲ್ಲಿ ರೌಂಡ್ಸ್ ಮಾಡ್ತಿದ್ದು, ಸುಖಾ ಸುಮ್ಮನೆ 10 ಗಂಟೆಯ ಮೇಲೆ ಓಡಾಟ ಮಾಡುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ.
ಬೆಳಗ್ಗೆಯಿಂದಲೇ ಟ್ರ್ಯಾಕ್ ಸೂಟ್ನಲ್ಲಿ ಬಂದಿದ್ದ ಎಸ್ಪಿ ಆರ್.ಶ್ರೀನಿವಾಸ್ ಗೌಡ ತಮ್ಮ ಪೊಲೀಸ್ ಇಲಾಖೆಯ ವಿವಿಧ ಸ್ತರದ ಸಿಬ್ಬಂದಿಯನ್ನು ಬಳಕೆ ಮಾಡಿಕೊಂಡು ಸ್ವತಃ ಫೀಲ್ಡ್ ಗಿಳಿದು ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ರು.
ನಗರದ ಎನ್.ಆರ್.ವೃತ್ತ ಮತ್ತು ಮಹಾವೀರ ವೃತ್ತ, ಎಂ.ಜಿ.ರಸ್ತೆ, ಸಹ್ಯಾದ್ರಿ ವೃತ್ತ, ಹಳೆ ಬಸ್ ನಿಲ್ದಾಣ, ಸೇರಿದಂತೆ ಹತ್ತಕ್ಕೂ ಹೆಚ್ಚು ಕಡೆ ಪೊಲೀಸರ ನಾಕ ಬಂದಿ ಹಾಕಿ ಸುಖಾ ಸುಮ್ಮನೆ ಓಡಾಟ ನಡೆಸುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸಿ ಸುಮಾರು 600ಕ್ಕೂ ಅಧಿಕ ವಾಹನಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದ್ರು.
ದಾಖಲಾತಿ ಇದ್ರೂ ಹಿಡಿತಿರಲ್ಲ ಸಾರ್ : ತಪಾಸಣೆ ವೇಳೆ ಕೆಲವು ಅಚಾತುರ್ಯಗಳು ಆಗುವುದು ಸಹಜ. ಅದೇ ರೀತಿ ಕೆಲವರು ದಾಖಲಾತಿ ತೋರಿಸಿದ್ರು ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ರು. ಇದರಿಂದ ಕುಪಿತಗೊಂಡ ವಾಹನ ಸವಾರರು ನೀವು ನಮ್ಮನ್ನು ತಡೆದು ಸುಖಾ ಸಮ್ಮನೆ ದಂಡವಿಧಿಸುವುದು ತರವಲ್ಲ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
ಐಷಾರಾಮಿ ಕಾರುಗಳು ಸೇರಿದಂತೆ 8 ಸಾವಿರಕ್ಕೂ ಅಧಿಕ ವಾಹನ ಸೀಜ್ : 2ನೇ ಅಲೆ ಪ್ರಾರಂಭವಾಗಿ ಲಾಕ್ಡೌನ್ ಶುರುವಾದ ಬಳಿಕ ಹಾಸನ ಜಿಲ್ಲೆಯಾದ್ಯಂತ ಸುಮಾರು 8 ಸಾವಿರಕ್ಕೂ ಅಧಿಕ ವಾಹನಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಇವತ್ತು ಐಷಾರಾಮಿ ಕಾರುಗಳಿಂದ ಹಿಡಿದು ಸಣ್ಣ ಪುಟ್ಟ ಕಾರುಗಳನ್ನು ಸೀಜ್ ಮಾಡಿ ಲಾಕ್ ಮಾಡಿದ್ದು ವಿಶೇಷ. ವಶಕ್ಕೆ ಪಡೆದ ವಾಹನಗಳನ್ನು ಲಾಕ್ಡೌನ್ ಮುಗಿಯುವ ತನಕ ವಾಹನದ ಮಾಲೀಕರಿಗೆ ನೀಡದಿರಲು ನಿರ್ಧರಿಸಿದ್ದಾರೆ. ಇನ್ನು ಕೆಲವು ವಾಹನಗಳಿಗೆ ದಂಡ ವಿಧಿಸಿದ್ದು, ನ್ಯಾಯಾಲಯದ ಮೂಲಕ ವಾಹನಗಳನ್ನು ಬಿಡಿಸಿಕೊಳ್ಳಲು ಅವಕಾಶ ನೀಡಿದ್ದಾರೆ.