ಹಾಸನ: ಕೊರೊನಾ ಹಿನ್ನೆಲೆ ಜಿಲ್ಲೆಯಲ್ಲಿ 3ನೇ ಹಂತವಾಗಿ ಕೆಲವು ಮಾರ್ಗಸೂಚಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡಿದ್ದು, ನಾಳೆಯಿಂದ ವಾರದಲ್ಲಿ ಮೂರು ದಿನ ಮಾತ್ರ ಜಿಲ್ಲಾದ್ಯಂತ ಎಲ್ಲಾ ಅಂಗಡಿ-ಮುಂಗಟ್ಟುಗಳು ತೆರೆಯಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸ್ಪಷ್ಟಪಡಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೆಲವು ನಿಯಮಗಳ ಪ್ರಕಾರ ಜಿಲ್ಲೆಯಲ್ಲಿ ಕೂಡ ಲಾಕ್ಡೌನ್ ಸಡಿಲಿಕೆ ಮಾಡಿದ್ದು, ವಾರದಲ್ಲಿ ಮೂರು ದಿನ ಬೆಳಗ್ಗೆ 7ರಿಂದ ರಾತ್ರಿ 7 ಗಂಟೆಯವರೆಗೆ ವ್ಯಾಪಾರ-ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ. ಜಿಲ್ಲಾ ವ್ಯಾಪ್ತಿಯೊಳಗೆ ಕೆಎಸ್ಆರ್ಟಿಸಿ ಸಂಚಾರ ಪ್ರಾರಂಭಿಸಲಿದೆ ಎಂದರು.
30 ಪ್ರಯಾಣಿಕರಿಗೆ ಅವಕಾಶ: ಕೆಎಸ್ಆರ್ಟಿಸಿಯ ಪ್ರತಿ ಬಸ್ನಲ್ಲಿ 30 ಪ್ರಯಾಣಿಕರು ಮಾತ್ರ ಪ್ರಯಾಣಿಸಬಹುದಾಗಿದೆ. 10 ವರ್ಷದ ಒಳಗಿನ ಹಾಗೂ 60 ವರ್ಷ ಮೇಲ್ಪಟ್ಟ ಪ್ರಯಾಣಿಕರಿಗೆ ಬಸ್ನಲ್ಲಿ ಪ್ರಯಾಣಿಸಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಮದ್ಯದಂಗಡಿ ತೆರೆಯುವ ನಿಯಮಗಳಡಿ ಎಂಎಸ್ಐಎಲ್ ಹಾಗೂ ಸಿಎಲ್ 2 ಮಳಿಗೆಗಳು ತೆರೆಯಲು ಅವಕಾಶವಿದೆ. ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ತೆರೆಯಲು ಅವಕಾಶವಿರುವುದಿಲ್ಲ. ಮದ್ಯದಂಗಡಿಯಿಂದ ಪಾರ್ಸಲ್ ತೆಗೆದುಕೊಂಡು ಹೋಗಬೇಕು. ಅಲ್ಲಿಯೇ ಮದ್ಯಪಾನ ಸೇವಿಸುವಂತಿಲ್ಲ ಎಂದು ಸೂಚಿಸಿದ್ದಾರೆ.
ದಿನ ಬಳಕೆ ವಸ್ತುಗಳನ್ನು ಖರೀದಿಸಲು ಮತ್ತು ವ್ಯಾಪಾರ ಮಾಡಲು ಅವಕಾಶವಿದ್ದು, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ-ವಹಿವಾಟು ನಡೆಸಬೇಕು. ಯಾವುದೇ ಶಾಲಾ-ಕಾಲೇಜುಗಳು ತೆರೆಯುವಂತಿಲ್ಲ. ನಿಯಮ ಉಲ್ಲಂಘಿಸಿದರೆ 100 ರೂಪಾಯಿ ದಂಡ ಹಾಗೂ ದ್ವಿಚಕ್ರ ವಾಹನದಲ್ಲಿ ಅನಾವಶ್ಯಕ ಸುತ್ತಾಡಿದವರಿಗೆ 500 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಕೂಡಾ ಶಿಕ್ಷಾರ್ಹ ಅಪರಾಧವಾಗಿದೆ. ಇನ್ನು ದೇವಸ್ಥಾನಗಳಲ್ಲಿ ಪ್ರತಿನಿತ್ಯ ನಡೆಯುವ ಪೂಜಾ ಕೈಂಕರ್ಯಗಳು ಮಾತ್ರ ನಡೆಯಲು ಅವಕಾಶ ನೀಡಿದ್ದು, ಅದಾದ ಬಳಿಕ ಕಡ್ಡಾಯವಾಗಿ ಬಾಗಿಲು ಹಾಕಬೇಕು. ಮದುವೆ-ಸಮಾರಂಭಗಳಿಗೆ 50ಕ್ಕೂ ಹೆಚ್ಚು ಜನರು ಭಾಗವಹಿಸದಂತೆ ಕಾರ್ಯಕ್ರಮ ಆಯೋಜನೆ ಮಾಡಿಕೊಳ್ಳಬೇಕು ಎಂದರು.
ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇತರೆ ಜಿಲ್ಲೆಯಿಂದ ಬರುವ ವ್ಯಕ್ತಿಗಳು ಜಿಲ್ಲಾಡಳಿತದ ಅನುಮತಿ ಪಡೆದು ಜಿಲ್ಲೆಗೆ ಆಗಮಿಸಬೇಕು. ಮದ್ಯದ ಅಂಗಡಿ ಎದುರು ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿ ಮಾಡಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಸೂಚಿಸಿದರು.