ಹಾಸನ: ಸ್ವಚ್ಛತೆ ಮತ್ತು ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಬೀದಿ ಬದಿ ಅಂಗಡಿಗಳನ್ನು ನಗರಸಭೆ ಅಧಿಕಾರಿಗಳು, ಪೊಲೀಸ್ ಸಹಾಯದೊಂದಿಗೆ ತೆರವುಗೊಳಿಸಿದರು.
ನಗರದ ನಿರಾಶ್ರಿತ ಕೇಂದ್ರದ ಕೆಳಗಡೆ ತೆರೆದುಕೊಂಡಿದ್ದ ಹೂ, ಬಟ್ಟೆ, ಸ್ಟೇಷನರಿ ಸೇರಿದಂತೆ ವಿವಿಧ ಅಂಗಡಿಗಳನ್ನು ಇಂದು ತೆರವುಗೊಳಿಸಲಾಗಿದೆ.
ನಿತ್ಯ ರಾಶಿಗಟ್ಟಲೇ ಕಸವನ್ನು ಇಲ್ಲಿ ಬೀಸಾಡಲಾಗುತ್ತಿತ್ತು. ಅಲ್ಲಿಯೇ ಮೂತ್ರ ವಿಸರ್ಜನೆ ಸೇರಿದಂತೆ ವ್ಯಾಪಾರ ವಹಿವಾಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿರಲಿಲ್ಲ. ಹೀಗಾಗಿ ನಗರಸಭೆ ಈ ಕ್ರಮಕ್ಕೆ ಮುಂದಾಗಿದೆ.
ಇಲ್ಲಿನ ಕೆಲವರು ಸಾರ್ವಜನಿಕರಿಗೆ ಭಯ ಹುಟ್ಟಿಸುವಂತೆ ಗುಂಡಾವರ್ತನೆ ಸಹ ತೋರಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ನಗರಸಭೆ ಆಯುಕ್ತರಿಗೆ ಸಾರ್ವಜನಿಕರು ಮನವಿ ಸಲ್ಲಿಸಿದ್ದರು. ಸಾರ್ವಜನಿಕರ ಮನವಿ ಮೇರೆಗೆ ನಗರಸಭೆ ಸಿಬ್ಬಂದಿಗಳೊಂದಿಗೆ ಪೊಲೀಸ್ ಇಲಾಖೆ ತೆರವು ಕಾರ್ಯಚರಣೆ ನಡೆಸಿತು.
ಈ ವೇಳೆ ಕೆಲ ವ್ಯಾಪಾರಸ್ಥರು ನಗರಸಭೆ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು. ನಗರಸಭೆ ಆಯುಕ್ತ ಕೃಷ್ಣಮೂರ್ತಿ, ಆರೋಗ್ಯಾಧಿಕಾರಿ ಆದೀಶ್ ಕುಮಾರ್, ರಾಹುಲ್ ಇದ್ದರು.