ಸಕಲೇಶಪುರ: ತಾಲೂಕಿನ ವನಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಂಗಳ್ಳಿ ಗ್ರಾಮದಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ರಕ್ಷಿಸಿದ ಸ್ಥಳೀಯರು ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.
ಕೊಂಗಳ್ಳಿ ಗ್ರಾಮದ ನಾಗಣ್ಣ ಎಂಬವರ ಕಾಫಿ ತೋಟದಲ್ಲಿ 14 ಅಡಿ ಉದ್ದ ಹಾಗೂ 12 ಕೆ.ಜಿ ತೂಕದ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ವಲಯ ಅರಣ್ಯಾಧಿಕಾರಿ ಮೋಹನ್ ಸೋಮವಾರಪೇಟೆ, ಉರಗ ಪ್ರೇಮಿ ರಘು ಎಂಬವರನ್ನು ಕರೆಸಿ ಸುಮಾರು 2 ಘಂಟೆಗೂ ಹೆಚ್ಚು ಸಮಯ ಕಾರ್ಯಾಚರಣೆ ನಡೆಸಿ ಹಾವು ಹಿಡಿದು ಬಿಸಲೆ ರಕ್ಷಿತಾರಣ್ಯಕ್ಕೆ ಬಿಟ್ಟರು.
ಸಾಮಾನ್ಯವಾಗಿ ಗಂಡು ಕಾಳಿಂಗ ಸರ್ಪ ಇತರ ಹಾವುಗಳ ಜೊತೆ ಹೆಣ್ಣು ಕಾಳಿಂಗ ಸರ್ಪವನ್ನೂ ತಿನ್ನುತ್ತದೆ. ಇದರಿಂದ ಹೆಣ್ಣು ಕಾಳಿಂಗ ಸರ್ಪಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕೊಂಗಳ್ಳಿ ಗ್ರಾಮದಲ್ಲಿ ಸೆರೆ ಹಿಡಿದ ಸರ್ಪವೂ, ಇನ್ನೊಂದು ಹಾವನ್ನು ತಿನ್ನಲು ಮುಂದಾಗಿತ್ತು.
ಇದನ್ನೂ ಓದಿ: ಕೊಡಗು: ಮರಗಳ ಅಕ್ರಮ ಸಾಗಾಟದಲ್ಲಿ ಅರಣ್ಯ ಸಿಬ್ಬಂದಿ ಶಾಮೀಲು ಆರೋಪ
ಪಶ್ಚಿಮ ಘಟ್ಟದ ಅತ್ಯಂತ ವಿಷಕಾರಿ ಹಾವು ಕಾಳಿಂಗ ಸರ್ಪ. ಕಾಳಿಂಗನ ಕಡಿತಕ್ಕೆ ಒಳಗಾದರೆ ಬದುಕುವುದು ಕಷ್ಟಸಾಧ್ಯ. ಆದರೂ, ಸಹ ಕಾರ್ಯಾಚರಣೆ ನಡೆಸಿ ಇಂತಹ ಹಾವು ಹಿಡಿದಿರುವುದಕ್ಕೆ ಗ್ರಾಮಸ್ಥರು ಉರಗ ಪ್ರೇಮಿ ರಘುವನ್ನು ಶ್ಲಾಘಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕ ಎಸ್.ಆರ್ ನವೀನ್ ಕುಮಾರ್, ಸಿಬ್ಬಂದಿ ಅಭಿಷೇಕ್ ಮತ್ತು ಇತರರು ಇದ್ದರು.