ಹಾಸನ: ಗಣರಾಜ್ಯೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ನಗರದ ಬಿ.ಎಂ. ರಸ್ತೆ ಬಳಿ ಸಿಲ್ವರ್ ಜೂಬ್ಲಿ ಪಾರ್ಕ್ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಫಲಪುಷ್ಪ ಪ್ರದರ್ಶನ ಮಂಗಳವಾರ ತೆರೆ ಕಂಡಿತು.
ಜನವರಿ 26ರಿಂದ 28ರವರೆಗೆ ನಡೆದಿದ್ದ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಬಗೆಯ ಹೂವುಗಳನ್ನು ಇಡಲಾಗಿತ್ತು. ಹೂವುಗಳಿಂದ ಮೂಡಿದ್ದ ಚಿತ್ರಕಲೆ, ಹಣ್ಣು ಮತ್ತು ತರಕಾರಿಯಲ್ಲಿ ಕೆತ್ತಿದ್ದ ಕವಿಗಳು ಹಾಗೂ ನಾಯಕರ ಮೂರ್ತಿಗಳು, ಹೂವಿನಿಂದ ಮಾಡಲಾಗಿದ್ದ ಫ್ರೇಮ್ ನೋಡುಗರ ಗಮನ ಸೆಳೆದವು.
ಮೂರು ದಿನಗಳ ಕಾಲ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಉತ್ತಮ ತೋಟಗಾರಿಕೆ ಉತ್ಪನ್ನಗಳನ್ನು ಪ್ರದರ್ಶಿಸಿದ ರೈತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡುವ ಮೂಲಕ ಪ್ರೋತ್ಸಹಿಸಲಾಯಿತು.