ಹಾಸನ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರನ್ನು ಬೀದಿಗೆ ತಳ್ಳುವ ಮೂಲಕ ಸರ್ಕಾರ ನಮಗೆ ದ್ರೋಹ ಎಸಗಿದೆ. ಸೇವಾ ವಿಲೀನತೆಯನ್ನು ಮಾಡಲು ಸಾಧ್ಯವಾಗದಿದ್ದರೆ, ದಯಾಮರಣಕ್ಕೆ ಅನುಮತಿ ನೀಡುವಂತೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ರಾಜ್ಯ ಸಮನ್ವಯ ಸಮಿತಿಯಿಂದ ಪತ್ರ ಚಳವಳಿ ನಡೆಸಿದರು.
ನಗರದ ಮುಖ್ಯ ಅಂಚೆ ಕಚೇರಿ ಆವರಣಕ್ಕೆ ತೆರಳಿದ ಅತಿಥಿ ಉಪನ್ಯಾಸಕರು, ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಸ್ಥಳದಲ್ಲೇ ಪತ್ರ ಬರೆದು ತಮ್ಮ ಬೇಡಿಕೆ ಈಡೇರಿಸದಿದ್ದರೆ ದಯಾಮರಣಕ್ಕೆ ಅನುಮತಿ ಕೊಡುವಂತೆ ಕೋರಿ ಪೋಸ್ಟ್ ಮಾಡುವ ಮೂಲಕ ಪತ್ರ ಚಳವಳಿ ನಡೆಸಿದರು.
ಇದನ್ನೂ ಓದಿ: ಒಂದು ಬೈಕ್ ಕಳ್ಳತನ ಪ್ರಕರಣ ಬೆನ್ನು ಹತ್ತಿದ ಪೊಲೀಸರಿಗೆ ಸಿಕ್ಕಿದ್ದು 25 ಬೈಕ್, ಲಕ್ಷಾಂತರ ಮೌಲ್ಯದ ಚಿನ್ನ..
ಅತಿಥಿ ಉಪನ್ಯಾಸಕರ ತನ್ನ ಬಹು ವರ್ಷಗಳ ಬೇಡಿಕೆಗಳಿಗೆ ಸ್ಪಂದಿಸುವ ನೆಪದಲ್ಲಿ ಕೇವಲ ಮಾಸಿಕ ವೇತನ ಹೆಚ್ಚಳದೊಂದಿಗೆ ಕಾರ್ಯಭಾರದ ಅವಧಿಯನ್ನು ಹೆಚ್ಚಳ ಮಾಡುವ ಮೂಲಕ ಕಳೆದ ಒಂದು ತಿಂಗಳಿನಿಂದ ಸಂವಿಧಾನ ಬದ್ಧ ಉದ್ಯೋಗದ ಹಕ್ಕುಗಳಿಗಾಗಿ ಮುಷ್ಕರದಲ್ಲಿದ್ದ ಅತಿಥಿ ಉಪನ್ಯಾಸಕರನ್ನು ವಿಭಜನೆ ಮಾಡುವ ಷಡ್ಯಂತ್ರ ರೂಪಿಸಲಾಗುತ್ತಿದೆ.
14,567 ಕಾರ್ಯನಿರತ ಅತಿಥಿ ಉಪನ್ಯಾಸಕರ ಶೇ.50ರಷ್ಟು ಜನರ ಅನ್ನ ಕಿತ್ತುಕೊಳ್ಳುವ ಕೆಟ್ಟ ಪರಂಪರೆಗೆ ಮಾನ್ಯ ಉನ್ನತ ಶಿಕ್ಷಣ ಸಚಿವರು ಮುಂದಾಗಿರುವುದನ್ನು ಖಂಡಿಸುತ್ತೇವೆ. ಕೂಡಲೇ ಸರ್ಕಾರ ಈ ನಿಲುವಿನಿಂದ ಹಿಂದೆ ಸರಿಯಬೇಕು ಎಂದರು.
ಕಳೆದ 45 ದಿನಗಳಿಂದಲೂ ಸರ್ಕಾರದ ಗುಲಾಮಗಿರಿ ಶೋಷಣೆಯ ನೀತಿಯಿಂದ ಬೇಸತ್ತ ಅತಿಥಿ ಉಪನ್ಯಾಸಕರು, ಒಕ್ಕೊರಲಿನಿಂದ ತರಗತಿ ಬಹಿಷ್ಕರಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಲ್ಯಾಣ ಸರ್ಕಾರದ ನೀತಿಗೆ ವಿರುದ್ಧವಾಗಿದೆ. ನಮ್ಮ ಸಮಸ್ಯೆಯನ್ನು ಆಲಿಸದ ಸರ್ಕಾರದ ಈ ನಿಲುವಿನಿಂದ ನಮ್ಮ ಜೀವನ ಅತಂತ್ರವಾಗಿದೆ ಎಂದು ಆತಂಕವ್ಯಕ್ತಪಡಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ 40:60ರ ಅನುಪಾತದಲ್ಲಿ ತರಗತಿ ವಿಭಜನೆ ಮಾಡಿ ಗುಣಮಟ್ಟದ ಶಿಕ್ಷಣ ನೀಡಲು ಸೂಚಿಸಿದೆ. ಇದರಿಂದ ಕಾರ್ಯಭಾರದ ಕೊರತೆ ಉಂಟಾಗುವುದಿಲ್ಲ.
ಜೊತೆಗೆ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಖಾಲಿ ಇರುವ ಕಾರ್ಯಭಾರಕ್ಕೆ ನಮ್ಮಗಳ ಸೇವೆ ವಿಲೀನ ಮಾಡುವ ಅವಕಾಶಗಳಿವೆ. ಕೂಡಲೇ ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಉದ್ಯೋಗ ಕಡಿತಗೊಳಿಸುವ ಮಾರಕ ಆದೇಶ ಹಿಂಪಡೆಯಲು ಈ ಮೂಲಕ ಆಗ್ರಹಿಸುತ್ತೇವೆ ಎಂದರು.
ಅತಿಥಿ ಉಪನ್ಯಾಸಕರೆಲ್ಲಾ ಸಮಸ್ಯೆಗಳನ್ನು ಬರೆದು ಈಡೇರಿಸದಿದ್ದರೇ ದಯಾಮರಣ ಕೊಡಬೇಕೆಂದು ಪತ್ರದಲ್ಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಒತ್ತಾಯಿಸಿದ್ದಾರೆ.