ಹಾಸನ/ಅರಸೀಕೆರೆ : ಪರಿಶಿಷ್ಟ ಜಾತಿಯಿಂದ ಲಂಬಾಣಿ, ಕೊರಮ, ಕೊರಚ, ಭೋವಿ ಜನಾಂಗವನ್ನ ಕೈಬಿಡಬಾರದು ಎಂದು ಆಗ್ರಹಿಸಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದಿಂದ ತಾಲೂಕಿನ ಅಂಚೆ ಕಚೇರಿಯ ಮುಂಭಾಗ ಪತ್ರ ಚಳವಳಿ ಮೂಲಕ ಪ್ರತಿಭಟನೆ ನಡೆಸಲಾಯಿತು.
ಇದೇ ವೇಳೆ ಮಾತನಾಡಿದ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಅಧ್ಯಕ್ಷ ಸದಾಶಿವ ನಾಯಕ್, ಯಾವುದೇ ಕಾರಣಕ್ಕೂ ನಮ್ಮ ಲಂಬಾಣಿ ಜನಾಂಗದವರನ್ನು ಪರಿಶಿಷ್ಟ ಜಾತಿಯಿಂದ ತೆಗೆಯಬಾರದು. ಸರ್ವೋಚ್ಛ ನ್ಯಾಯಾಲಯದಲ್ಲಿಯೇ ಇದರ ಬಗ್ಗೆ ಮುಕ್ತಾಯ ಹಂತ ತಲುಪಿರುವಾಗ, ಯಾರೋ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರದಿಂದ ನಮ್ಮನ್ನು ಪರಿಶಿಷ್ಟ ಜಾತಿಯಿಂದ ಕೈಬಿಡುವುದು ಎಷ್ಟು ಸಮಂಜಸ ಎಂದರು. ಹೀಗಾಗಿ ಇಂದು ನಾವುಗಳು ಪತ್ರ ಚಳವಳಿಯ ಮೂಲಕ ಮುಖ್ಯಮಂತ್ರಿಗಳಿಗೆ ನಮ್ಮ ಮನವಿಗಳನ್ನ ರವಾನಿಸುತ್ತಿದ್ದೇವೆ ಎಂದರು.
ಮೈಸೂರು ಪ್ರಾಂತ್ಯದ ಲಂಬಾಣಿ ಸಮಾಜದ ಅಧ್ಯಕ್ಷ ಗಂಗಾಧರ ನಾಯ್ಕ್ ಮಾತನಾಡಿ, ನಮ್ಮ ತಾಲೂಕಿನಿಂದ ಸುಮಾರು 14 ಸಾವಿರ ಪತ್ರ ಬರೆದು ಮನವಿ ಸಲ್ಲಿಸಿದ್ದೇವೆ. ಯಾವುದೇ ಕಾರಣಕ್ಕೂ ನಮ್ಮ ಸಮಾಜವನ್ನ ಪರಿಶಿಷ್ಟ ಜಾತಿಯಿಂದ ಕೈಬಿಡಬಾರದು. ನಮ್ಮ ಮನವಿಗೆ ಸರ್ಕಾರ ಸ್ಪಂದಿಸದಿದ್ದರೇ ಮುಂದಿನ ನಮ್ಮ ಹೋರಾಟ ಉಗ್ರ ಸ್ವರೂಪ ಪಡೆಯುತ್ತದೆ. ಅದಕ್ಕೆ ಅವಕಾಶ ಕೊಡಬಾರದು ಮತ್ತು ಮುಂದಿನ ದಿನದಲ್ಲಿ ಏನಾದ್ರೂ ಅಹಿತಕರ ಘಟನೆ ನಡೆದ್ರೆ ಅದಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಸಾಕಿ ಮಂಜುನಾಥ್, ಕೃಷ್ಣನಾಯ್ಕ, ಪ್ರದೀಪ್ ನಾಯ್ಕ, ಮೂರ್ತಿ ನಾಯ್ಕ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಮಂಜುಳಾ ಚಂದ್ರಾ ನಾಯ್ಕ್, ಜಿಪಂ ಮಾಜಿ ಸದಸ್ಯೆ ಸುಲೋಚನಬಾಯಿ, ತಿರುಪತಿಬಾಯಿ,ಭೋಜಾ ನಾಯ್ಕ್, ಹೇಮೋಜಿ ನಾಯ್ಕ್ ಸೇರಿ ಹಾಸನ ಜಿಲ್ಲಾ ಬಂಜಾರ್ ಯುವ ಸೇನೆ ಅಧ್ಯಕ್ಷ ಓಂಕಾರ್ ನಾಯ್ಕ್ ಹಾಜರಿದ್ದರು.