ಹಾಸನ: ನಿರ್ಮಲಾ ಸೀತರಾಮನ್ ಮಂಡಿಸಿದ ಕೇಂದ್ರ ಸರ್ಕಾರದ ಬಜೆಟ್ ಬಡವರ ಪರವಾಗಿದ್ದು, ಇದು ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕೃಷಿ ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಹೇಳಿದ್ದಾರೆ.
ಹಾಸನದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಈ ಬಾರಿಯ ಕೇಂದ್ರ ಬಜೆಟ್ ವಿಶೇಷವಾಗಿ ಕೃಷಿ ಹಾಗೂ ರೈತರಿಗೆ ಪೂರಕವಾಗಿದ್ದು, ಒಳ್ಳೆಯ ಯೋಜನೆಗಳು ಜಾರಿಯಾಗಿವೆ. ಇದು ಅತ್ಯುತ್ತಮ ಬಜೆಟ್ ಆಗಿದ್ದು, ಕೃಷಿ ಸಚಿವನಾಗಿ ನಾನು ಸ್ವಾಗತ ಮಾಡುತ್ತೇನೆ ಎಂದರು. ಕರ್ನಾಟಕಕ್ಕೆ ವಿಶೇಷ ರೈಲು ಯೋಜನೆ ದೊರೆತಿದ್ದು, ತೆರಿಗೆ ಕಡಿತ, ಜಿಡಿಪಿ ದರ ಶೇ.10 ಕ್ಕೆ ಏರಿಸುವ ಗುರಿ ದೇಶದ ಅಭಿವೃದ್ದಿಗೆ ಪೂರಕವಾಗುತ್ತದೆ ಎಂದರು.
ಸಚಿವ ಸಂಪುಟದ ವಿಸ್ತರಣೆ ಬಗ್ಗೆ ಈಗಾಗಲೆ ಮುಖ್ಯಮಂತ್ರಿಯವರು ಕೇಂದ್ರದ ನಾಯಕರ ಜೊತೆ ಮಾತನಾಡಿದ್ದು, ಮೂರ್ನಾಲ್ಕು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂದು ತಿಳಿಸಿದರು.
ಉಪಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಹಾಸನಕ್ಕೆ ಆಗಮಿಸಿದ ಸಚಿವ ಲಕ್ಷ್ಮಣ ಸವದಿ ಅವರಿಗೆ ಪೊಲೀಸರಿಂದ ಗೌರವ ವಂದನೆ ಸಲ್ಲಿಸಲಾಯಿತು.