ಹಾಸನ : ಕರ್ತವ್ಯಕ್ಕೆ ತೆರಳುತ್ತಿದ್ದ ವಕೀಲರೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಅಪಘಾತಕ್ಕೆ ಸಂಚಾರಿ ಪೊಲೀಸರೇ ಕಾರಣ ಎಂದು ಆರೋಪಿಸಿ ವಕೀಲರು ಇಂದು ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ನಗರದ ಎನ್.ಆರ್.ವೃತ್ತದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ವಕೀಲ ನಜೀರ್ ಅಹಮದ್ ಎಂಬುವರ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ. ಈ ಅಪಘಾತಕ್ಕೆ ಸಂಚಾರಿ ಪೊಲೀಸರ ಕರ್ತವ್ಯ ಲೋಪವೇ ಕಾರಣ ಎಂದು ಆರೋಪಿಸಿ ಜಿಲ್ಲಾ ವಕೀಲರುಗಳು ದಿಢೀರ್ ರಸ್ತೆ ತಡೆ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದರು.
ಪೊಲೀಸರು ಬಡ ರೈತರ ಬಳಿ ಲಂಚ ವಸೂಲಿ ಮಾಡುವುದರಲ್ಲಿ ನಿರತರಾಗಿದ್ದಾರೆ. ಅವರು ಸರಿಯಾಗಿ ಕರ್ತವ್ಯ ನಿಭಾಯಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಮತ್ತು ವಕೀಲರ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು.
ಮಹಿಳೆ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಬಲಿಕೊಟ್ಟ ವಕೀಲ
ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮಹಿಳೆಯನ್ನ ರಕ್ಷಣೆ ಮಾಡಲು ಹೋದ ಸಂದರ್ಭದಲ್ಲಿ ಚಕ್ರಕ್ಕೆ ಸಿಲುಕಿ ವಕೀಲ ನಜೀರ್ ಅವರು ಸಾವನ್ನಪ್ಪಿರುವುದು ಸಿಸಿ ಟಿವಿ ದೃಶ್ಯದಿಂದ ಗೊತ್ತಾಗಿದೆ. ವಕೀಲರ ಸಾವಿಗೆ ಜಿಲ್ಲೆಯ ಜನತೆ ಹಾಗೂ ವಕೀಲರ ಸಂಘ ಸಂತಾಪ ವ್ಯಕ್ತಪಡಿಸಿದೆ.