ಹಾಸನ: ಹೊಳೆನರಸೀಪುರಕ್ಕೆ ಹಾದು ಹೋಗುವ ಎನ್.ಹೆಚ್.ರಸ್ತೆಗೆ ಭೂ ಸ್ವಾಧೀನ ಮಾಡಿಕೊಳ್ಳುವ ಮೊದಲು ಪರಿಹಾರ ನೀಡಿ ನಂತರ ರಸ್ತೆ ಕೆಲಸ ಆರಂಭಿಸಬೇಕು. ರಾಜಕೀಯ ಕಿತ್ತಾಟದಲ್ಲಿ ನಮಗೆ ಪರಿಹಾರ ಸಿಗದಿದ್ದರೆ ಭೂಸ್ವಾಧೀನಕ್ಕೆ ಅವಕಾಶ ಕೊಡುವುದಿಲ್ಲ ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಎದುರು ತಮ್ಮ ಅಳಲು ತೋಡಿಕೊಂಡರು.
ಎಂ. ಹೊಸಕೊಪ್ಪಲಿನಲ್ಲಿ ನಿವಾಸಿಗಳ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ನೆರವೇರಿಸಿ ನಂತರ ಇಲ್ಲಿನ ನಿವಾಸಿಗಳ ಸಮಸ್ಯೆ ಆಲಿಸಿದ ಶಾಸಕರಿಗೆ ರಸ್ತೆ ಅಗಲಿಕರಣದ ಭೂ-ಸ್ವಾಧೀನದ ಪರಿಹಾರ ಕುರಿತು ವಾಗ್ದಾಳಿ ನಡೆಸಿದರು.
ಹೊಳೆನರಸೀಪುರ ರಸ್ತೆಗೆ ಹಾದು ಹೋಗುವ ಎಂ. ಹೊಸಕೊಪ್ಪಲು ರಸ್ತೆಯ ಉದ್ದಕ್ಕೂ ನೂತನವಾಗಿ ಕಾಂಕ್ರೀಟ್ ರಸ್ತೆ ಕೆಲಸ ಪ್ರಾರಂಭವಾಗಿದೆ. ರಸ್ತೆಮಧ್ಯೆಯಿಂದ 20 ಮೀಟರ್ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದು, ಈ ಭಾಗದಲ್ಲಿರುವ ಅನೇಕ ಮನೆಗಳು ಈ ರಸ್ತೆಗೆ ಆಹುತಿಯಾಗುತ್ತದೆ. ಭೂಸ್ವಾಧೀನಕ್ಕೆ ಪರಿಹಾರ ಕೊಡುವುದಾಗಿ ಒಂದು ಕಡೆ ಶಾಸಕ ಪ್ರೀತಮ್ ಜೆ. ಗೌಡ ಭರವಸೆ ನೀಡಿದರೆ, ಇನ್ನೊಂದೆಡೆ ಸಂಸದ ಪ್ರಜ್ವಲ್ ರೇವಣ್ಣ ಪರಿಹಾರ ಕೊಡಿಸುವುದಾಗಿ ಹೇಳುತ್ತಾರೆ.
ನಮಗೆ ಇಂದಿನ ಬೆಲೆಗೆ ಭೂಮಿಗೆ ಪರಿಹಾರ ಸಿಗಬೇಕು. ಭೂಮಿ ಸ್ವಾಧೀನಕ್ಕಾಗಿ ಸರ್ವೆಯರ್ ಬಂದು ಅಳತೆ ಮಾಡಿ ಮಾರ್ಕ್ ಮಾಡುವಾಗ ಪ್ರಶ್ನೆ ಮಾಡಿದರೆ ನಮ್ಮನ್ನು ಕೇಳಬೇಡಿ ಅಧಿಕಾರಿಗಳನ್ನು ಕೇಳಿ ಎನ್ನುತ್ತಾರೆ. ಇಂತಹ ಸ್ಥಿತಿಯಲ್ಲಿ ಇಲ್ಲಿನ ನಿವಾಸಿಗಳು ಆತಂಕದಲ್ಲಿ ಇದ್ದು, ನಮಗೆ ಇಂದಿನ ದರದಲ್ಲಿ ತಕ್ಕ ಪರಿಹಾರ ಸಿಗದಿದ್ದರೆ ರಸ್ತೆ ಅಗಲೀಕರಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದರು.