ಹಾಸನ: ಎತ್ತಿನಹೊಳೆ ಯೋಜನೆಗೆ ಭೂಮಿ ಸ್ವಾಧೀನಪಡಿಸಿಕೊಂಡು ಪರಿಹಾರ ಒದಗಿಸದೇ ಕಾಮಗಾರಿಗೆ ಮುಂದಾಗಿರುವ ಸರ್ಕಾರದ ಕ್ರಮ ವಿರೋಧಿಸಿ 15 ದಿನಗಳಿಂದ ಸಂತ್ರಸ್ತ ರೈತರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ಶನಿವಾರ ಪ್ರತಿಭಟನಾ ನಿರತ ಸ್ಥಳದಲ್ಲಿ ಅಡುಗೆ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದರು.
ಕೋಲಾರ ಚಿಕ್ಕಬಳ್ಳಾಪುರ ಮತ್ತು ತುಮಕೂರು ಭಾಗಗಳಿಗೆ ನೀರು ಹರಿಸುವ ಸಲುವಾಗಿ 2013ರಲ್ಲಿ ಪ್ರಾರಂಭವಾದ ಎತ್ತಿನಹೊಳೆ ಯೋಜನೆಯ ಕಾಮಗಾರಿ ಹತ್ತು ವರ್ಷ ಕಳೆದರೂ ಇನ್ನೂ ಕುಂಟುತ್ತ ಸಾಗುತ್ತಿದೆ. 15 ದಿನಗಳ ಹಿಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಯೋಜನೆಯನ್ನು ಪರಿಶೀಲನೆ ಮಾಡಿದ ಬಳಿಕ ನೂರು ದಿನಗಳಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಬೇಕು ಅಂತ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಡಿಸಿಎಂ ಸೂಚನೆ ಬಳಿಕ ಅಧಿಕಾರಿಗಳು ತರಾತುರಿಯಲ್ಲಿ ಜಮೀನನ್ನು ಭೂಸ್ವಾಧೀನಕ್ಕೆ ಪಡೆದು ರೈತರಿಗೆ ಪರಿಹಾರ ನೀಡದೇ ಕಾಮಗಾರಿ ಶುರು ಮಾಡಿದ್ದಾರೆ.ಭೂಮಿ ಬಿಡಿ ಇಲ್ಲವೇ ಪರಿಹಾರ ನೀಡಬೇಕೆಂದು ಆಗ್ರಹಿಸಿ ಬೇಲೂರು ಭಾಗದ ರೈತರು ಕಳೆದ 15 ದಿನಗಳಿಂದ ಅಹೋರಾತ್ರಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ದಿನದಿಂದ ದಿನಕ್ಕೆ ಪ್ರತಿಭಟನೆ ಈಗ ಉಗ್ರ ಸ್ವರೂಪ ತಾಳುತ್ತಿದೆ.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಡಳಿತದ ಸೂಚನೆಯ ಮೇರೆಗೆ ಬೇಲೂರು ಮತ್ತು ಅರಸೀಕೆರೆಯ ಪೊಲೀಸ್ ಇಲಾಖೆ ಹಾಗೂ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದರೂ, ಮಾತುಕತೆ ಸಫಲವಾಗಿಲ್ಲ. ಇದೇ ವೇಳೆ ಪ್ರತಿಭಟನಾ ನಿರತ ರೈತರು ಮತ್ತು ಸರ್ಕಾರಿ ಅಧಿಕಾರಿಗಳ ನಡುವೆ ವಾಕ್ ಸಮರ ನಡೆದಿದೆ.ಕೊನೆಗೆ ರೈತರ ಸಂಕಷ್ಟ ಅರ್ಥ ಮಾಡಿಕೊಂಡ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳದಿಂದ ವಾಪಸ್ ಆಗಿದ್ದಾರೆ.
ಈಟಿವಿ ಭಾರತ್ದೊಂದಿಗೆ ಸಂತ್ರಸ್ತ ರೈತ ಸಿದ್ದೇಶ್ ಮಾತನಾಡಿ, ಸುಮಾರು 80 ವರ್ಷಗಳಿಂದಲೂ ಸುಮಾರು 63 ಕುಟುಂಬಗಳು ಜಮೀನನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಇರುವ ಭೂಮಿಯನ್ನು ಕಂಪನಿ ಕಿತ್ತುಕೊಂಡು ನಮಗೆ ಮಂಕುಬೂದಿ ಎರಚಿ ಒಪ್ಪಂದ ಕರಾರು ಪತ್ರಕ್ಕೆ ಸಹಿ ಮಾಡಿಸಿಕೊಂಡಿದೆ. ಆದರೆ ಪರಿಹಾರವನ್ನು ನೀಡಲು ಮಾತ್ರ ಮೀನಾ ಮೇಷ ಎಣಿಸುತ್ತಿದೆ. ಪರಿಹಾರ ನೀಡಿದ ಬಳಿಕವಷ್ಟೇ ನಾವು ಭೂಮಿಯನ್ನ ಹಸ್ತಾಂತರ ಮಾಡುತ್ತೇವೆ. ಸರ್ಕಾರ ನಮ್ಮನ್ನ ಒಕ್ಕಲೆಬ್ಬಿಸಲು ಪ್ರಯತ್ನ ಪಟ್ಟರೆ ಅಧಿಕಾರಿಗಳ ಹೆಸರನ್ನು ಬರೆದು ಆತ್ಮಹತ್ಯೆ ಮಾಡಿಕೊಳ್ಳುವದಕ್ಕೂ ಹಿಂಜರಿಯುವದಿಲ್ಲ ಎಂದು ಎಚ್ಚರಿಕೆ ನೀಡಿದರು.
ನಾಲ್ಕು ವರ್ಷಗಳಿಂದಲೂ ನಮಗೆ ಪರಿಹಾರ ನೀಡುತ್ತೇವೆ ಅಂತ ಸರ್ಕಾರ ವಂಚಿಸುತ್ತಿದೆ. ಈಗ ಎಕಾಏಕಿ ಡಿಕೆ ಶಿವಕುಮಾರ್ ಆದೇಶದ ಮೇರೆಗೆ ನಮ್ಮ ಜಮೀನನ್ನು ಆಕ್ರಮಣ ಮಾಡಿಕೊಂಡು ಕಾಮಗಾರಿ ನಡೆಸಲು ಮುಂದಾಗಿದಕ್ಕೆ ನಾವು ರೈತರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದೇವೆ. ನಮಗೆ ಈಗಾಗಲೇ ವಯಸ್ಸಾಗಿದೆ. ದುಡಿವ ಶಕ್ತಿ ನಮ್ಮಲ್ಲಿಲ್ಲ. ಜಮೀನೂ ಕಳೆದುಕೊಂಡು ಪರಿಹಾರ ಸಿಗದೇ ಬದುಕುವುದಾದರೂ ಹೇಗೆ ? ದಯಮಾಡಿ ನಮಗೆ ನಮ್ಮ ಪರಿಹಾರವನ್ನ ಕೊಟ್ಟು ಕಾಮಗಾರಿ ಮಾಡಿಕೊಳ್ಳಿ. ಇಲ್ಲವೇ ನಮ್ಮ ಜೀವ ಹೋದರು ನಾವು ಪ್ರತಿಭಟನೆ ಹಿಂಪಡೆಯುವದಿಲ್ಲ ಎಂದು ಸಂತ್ರಸ್ತ ರೈತ ಮಹಿಳೆಯರಾದ ರತ್ನಮ್ಮ, ಪುಟ್ಟಮ್ಮ ಕಣ್ಣೀರು ಹಾಕಿದರು.
100 ದಿನದಲ್ಲಿ ಎತ್ತಿನಹೊಳೆ ಮೊದಲ ಹಂತದ ಕಾಮಗಾರಿ ಮುಕ್ತಾಯಗೊಳಿಸಿ ನೀರನ್ನು ಹರಿಸಬೇಕು ಅಂತ ಸರ್ಕಾರ ಪಣತೊಟ್ಟಿದೆ. ಆದರೆ ಭೂಮಿ ಕಳೆದುಕೊಂಡ ರೈತರು ಪರಿಹಾರವೂ ಸಿಗದೇ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಸುವ ಮೂಲಕ ಜೀವ ಬಿಟ್ಟೆವು ಭೂಮಿ ಬಿಡೆವೂ ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ.
ಇದನ್ನೂಓದಿ:ಸರ್ಕಾರ ತಮಿಳುನಾಡಿಗೆ ನೀರು ಬಿಡುವ ನಿರ್ಧಾರ ಮಾಡಿ ರಾಜ್ಯದ ಜನತೆಗೆ ದೋಖಾ ಮಾಡಿದೆ: ಬಸವರಾಜ ಬೊಮ್ಮಾಯಿ