ಹಾಸನ: ಒಂದು ಕಾಲಕ್ಕೆ ಹಾಸನ ಜಿಲ್ಲೆಯಲ್ಲಿ ತನ್ನ ಅಸ್ತಿತ್ವನ್ನ ಹೊಂದಿ, ಜೆಡಿಎಸ್‌ಗೆ ಟಫ್ ಫೈಟ್ ನೀಡುವ ಸಾಮರ್ಥ್ಯ ಹೊಂದಿದ್ದ ಕಾಂಗ್ರೆಸ್ ಇಂದು ಹೇಳ ಹೆಸರಿಲ್ಲದಂತಾಗಿದೆ. ಇದಕ್ಕೆಲ್ಲ ನಾಯಕರ ಕೊರತೆ ಕಾರಣ ಎಂಬುದು ಎದ್ದು ಕಾಣುತ್ತಿದೆ.
ಹೌದು, ಕಾಂಗ್ರೆಸ್ ಪಕ್ಷಕ್ಕೆ ತನ್ನದೆಯಾದ ಇತಿಹಾಸವಿದೆ. ಹಾಸನ ಜಿಲ್ಲೆಯಲ್ಲೂ ಕಾಂಗ್ರೆಸ್ ಪಕ್ಷವನ್ನ ಕಟ್ಟಿ ಬೆಳಸುವ ನಿಟ್ಟಿನಲ್ಲಿ ಹಲವಾರು ಧೀಮಂತ ನಾಯಕರ ಪರಿಶ್ರಮವಿದೆ. ಒಮ್ಮೆ ಹಿಂತಿರುಗಿ ನೋಡಿದ್ರೆ, ಜಿಲ್ಲೆಯಲ್ಲಿ ಸದೃಢವಾಗಿದ್ದ ರಾಷ್ಟ್ರೀಯ ಪಕ್ಷ ಇದೇನಾ ಅನ್ನೋ ಅನುಮಾನ ಪ್ರತಿಯೊಬ್ಬರನ್ನ ಕಾಡದೇ ಇರದು. ಕಾಂಗ್ರೆಸ್ ಪಕ್ಷ ನಾಯಕರ ಕೊರತೆಯಿಂದಾಗಿ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವವನ್ನ ಕಳೆದುಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಅಬ್ಬರಿಸುತ್ತಿದ್ದ ರಾಷ್ಟ್ರೀಯ ಪಕ್ಷವೊಂದು ಕಣ್ಮರೆಯಾಗುತ್ತಿರೋ ಬಗ್ಗೆ ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಕೈ ಪಕ್ಷದಿಂದ ಟಿಕೆಟ್ ಗಿಟ್ಟಿಸಿಕೊಳ್ಳಲಾಗದೇ ಎ.ಮಂಜು ಬಿಜೆಪಿಗೆ ಹೋದರು. ಆ ವೇಳೆ ಎ.ಮಂಜು ಜೊತೆ ಅವರ ಅನುಯಾಯಿಗಳೂ ಪಕ್ಷ ತೊರೆದರು. ಮತ್ತೆ ಕೆಲವರು ಪಕ್ಷದೊಳಗ್ಗಿದ್ದುಕೊಂಡೇ ಎ.ಮಂಜು ಅವರಿಗೆ ಬಹುಪರಾಕ್ ಎಂದುಬಿಟ್ಟಿದ್ರು. ಇದರ ಫಲಿತಾಂಶವೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಎದುರು ಬಿಜೆಪಿಯಿಂದ ಸ್ಪರ್ಧಿಸಿ ಬರೋಬ್ಬರಿ 5 ಲಕ್ಷ ಮತಗಳನ್ನ ತಮ್ಮದಾಗಿಸಿಕೊಂಡ್ರು ಎ.ಮಂಜು.
ಜಿಲ್ಲೆಯಲ್ಲಿ ಕಟು ವೈರಿಯಂತಿದ್ದ ಜೆಡಿಎಸ್ ಜೊತೆ ರಾಜ್ಯಮಟ್ಟದಲ್ಲಿ ನಡೆದ ಮೈತ್ರಿಯಿಂದಾಗಿ ಜಿಲ್ಲೆಯಲ್ಲಿ ಒಂದು ಮಟ್ಟಕ್ಕೆ ಕಾಂಗ್ರೆಸ್ ಹಲ್ಲುಕಿತ್ತ ಹಾವಿನಂತಾಗಿದೆ. ಮತ್ತೊಂದೆಡೆ ಸ್ಥಳೀಯ ಕಾಂಗ್ರೆಸ್ ಮುಂಖಡರ ನಡುವಿನ ಸಾಮರಸ್ಯ ಕೊರತೆ, ಪ್ರತಿಯೊಬ್ಬರೂ ತಾವೇ ನಾಯಕರಾಗಬೇಕೆಂಬ ಪೈಪೋಟಿ ನಡುವೆ ಮೋದಿ ಅಲೆಯ ಸುಳಿಗೆ ಸಿಲುಕಿ ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ತಮಗೆ ಅನ್ಯಾಯವಾದ್ರೂ ಅದನ್ನ ಪ್ರಶ್ನಿಸುವ ನಾಯಕರೇ ಇಲ್ಲದಂತಾಗಿದೆ. ತಮ್ಮ ರಾಜ್ಯ ನಾಯಕರ ಜನಪರ ಕೆಲಸಗಳನ್ನ ಜನರ ಮುಂದೆ ಹೇಳಿಕೊಂಡು ಪಕ್ಷ ಸಂಘಟಿಸುವ ಚೈತನ್ಯವನ್ನೇ ಕಳೆದುಕೊಂಡಿರೋದು ವಿಪರ್ಯಾಸ ಎನ್ನುತ್ತಾರೆ ಹಿರಿಯ ಜಿಲ್ಲಾ ಕಾಂಗ್ರೆಸ್ ನಾಯಕರು.