ಹಾಸನ: ಕೊರೊನಾ ಹರಡಿದ ಸಂದರ್ಭದಲ್ಲಿ ಸ್ಯಾನಿಟೈಸರ್ ಮತ್ತು ಮಾಸ್ಕ್ಗಳನ್ನು ದುಪ್ಪಟ್ಟು ಬೆಲೆಯಲ್ಲಿ ಖರೀದಿ ಮಾಡಲಾಗಿದೆ ಎಂಬ ದೂರು ಬಂದಿದ್ದು, ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ನಡೆಸಿದ ಬಳಿಕ ಬರುವ ವರದಿಯಲ್ಲಿ ಸತ್ಯಾಂಶ ತಿಳಿಯಲಿದೆ. ಪ್ರತಿಪಕ್ಷದವರು ಸರ್ಕಾರವನ್ನು ಹೊಡೆಯಲು ಸಾಧ್ಯವೇ? ಸುಖಾಸುಮ್ಮನೆ ಆರೋಪ ಮಾಡುತ್ತಾರೆ. ಮಾಸ್ಕ್ ಮತ್ತು ಸ್ಯಾನಿಟೈಸರ್ ದುಪ್ಪಟ್ಟು ಬೆಲೆಗೆ ಖರೀದಿಸಿರುವ ಕುರಿತು ದಾಖಲೆ ಬಿಡುಗಡೆ ಮಾಡಲಿ. ನಾವೂ ದಾಖಲೆ ಬಿಡುಗಡೆ ಮಾಡುತ್ತೇವೆ. ಆಗ ಸತ್ಯಾಂಶ ತಿಳಿಯಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪದ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದಲ್ಲಿ 65 ಸಕ್ಕರೆ ಕಾರ್ಖಾನೆಗಳಿದ್ದು, ಲಾಕ್ಡೌನ್ ಪೂರ್ವದಲ್ಲಿ ಕಬ್ಬು ಬೆಳೆಗಾರರು ₹ 72 ಸಾವಿರ ಕೋಟಿ ರೂ. ಮೌಲ್ಯದ ಕಬ್ಬನ್ನು ಬೆಳೆದಿದ್ದಾರೆ. ಅದರಲ್ಲಿ ₹ 71,435 ಕೋಟಿ ಹಣ ರೈತರ ಕೈ ಸೇರಿದೆ. ಉಳಿದ ಹಣ ವಿವಿಧ ಕಾರ್ಖಾನೆಗಳಿಂದ ದೊರೆಯಬೇಕಾಗಿದೆ. ಅವುಗಳಿಗೆ ನೋಟಿಸ್ ಕಳುಹಿಸಿ, ಶೀಘ್ರವಾಗಿ ಹಣ ದೊರೆಯುವಂತೆ ಮಾಡಲಾಗುತ್ತದೆ ಎಂದರು.
ಲಾಕ್ಡೌನ್ನಿಂದ ಸಕ್ಕರೆ ಕಾರ್ಖಾನೆಗಳಿಗೂ ಸಮಸ್ಯೆಯಾಗಿದೆ. ಕಬ್ಬು ಬೆಳೆಯುವ ರೈತರಿಗೆ ಅನುಕೂಲವಾಗುವಂತೆ ಈಗಾಗಲೇ ಮುಚ್ಚಿರುವ ಎರಡು ಸಕ್ಕರೆ ಕಾರ್ಖಾನೆಗಳನ್ನು ಟೆಂಡರ್ ಮೂಲಕ 40 ವರ್ಷಕ್ಕೆ ₹405 ಕೋಟಿ ಸರ್ಕಾರಕ್ಕೆ ನೀಡುವಂತೆ ಸೂಚಿಸಿ 4 ತಿಂಗಳೊಳಗೆ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.
ಕಟ್ಟಡ ಕಾರ್ಮಿಕರಿಗೆ ತಲಾ ₹ 5,000 ಪ್ಯಾಕೇಜ್ ಘೋಷಿಸಿದ್ದು, 16 ಲಕ್ಷ ಮಂದಿಗೆ ₹800 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕ್ಷೌರಿಕರು, ಅಗಸರು, ಕಟ್ಟಡ ಕಾರ್ಮಿಕರು ಹಾಗೂ ನರೇಗಾ ಅಡಿಯ ಕಾರ್ಮಿಕರು ಹೆಸರು ನೋಂದಾಯಿಸಿಕೊಂಡು ಕಾರ್ಮಿಕ ಇಲಾಖೆಯಿಂದ ₹ 45 ಕೋಟಿ ಪಡೆದಿದ್ದಾರೆ. ಹಾಗೆಯೇ ವಿವಾಹವಾದವರು ಮತ್ತು ವಿದ್ಯಾರ್ಥಿಗಳಿಗೆ ಕೊಡಬೇಕಾದ ಶುಲ್ಕ ನೀಡಲು ಹಾಸನದ ಫಲಾನುಭವಿಗಳಿಗೆ ₹9 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.