ಹಾಸನ: ಜಿಲ್ಲೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಕೆಎಸ್ಆರ್ಟಿಸಿ ಹಾಗೂ ಓಮ್ನಿ ಕಾರು ಪರಸ್ಪರ ಡಿಕ್ಕಿ ಹೊಡೆದು ಒಂದೇ ಕುಟುಂಬದ ಮೂರು ಮಂದಿ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಅರಸೀಕೆರೆ ತಾಲೂಕಿನ ದೇವರಸನಹಳ್ಳಿ ಬಳಿ ನಡೆದಿದೆ.
ಮುಜೀಬ್(53) ,ಸಾಧಿಕ್(22) ,ಮುಸ್ಕಾನ್ (19) ಮೃತರು. ಅಪಘಾತದಲ್ಲಿ ಗಾಯಗೊಂಡಿರುವ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಮಕೂರು ಜಿಲ್ಲೆ ಮಧುಗಿರಿಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಕಾರಿನ ಚಾಲಕನ ನಿದ್ದೆ ಮಂಪರಿನಲ್ಲಿದ್ದ ಎನ್ನಲಾಗುತ್ತಿದ್ದು, ಎದುರಿನಿಂದ ಬಂದ ಸಾರಿಗೆ ವಾಹನದ ಬೆಳಕಿನ ಪ್ರಖರತೆಯಿಂದ ಈ ಅಪಘಾತ ನಡೆದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಇದು ಜಿಲ್ಲೆಯಲ್ಲಿ ಸಂಭವಿಸಿದ ಮೂರನೇ ಭೀಕರ ದುರಂತವಾಗಿದ್ದು, ಒಂದೂವರೆ ತಿಂಗಳ ಹಿಂದೆ ಚನ್ನರಾಯಪಟ್ಟಣ ಬಳಿ ಒಂದೇ ಕುಟುಂಬದ ನಾಲ್ವರು ಬಲಿಯಾಗಿದ್ದರು. ಕಳೆದ ಭಾನುವಾರ ಶಿರಾಡಿಘಾಟ್ ರಸ್ತೆಯಲ್ಲೂ ಕೂಡಾ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು.
ಪ್ರಕರಣ ಸಂಬಂಧ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.