ಹಾಸನ: ಬೇಲೂರಿನ ವೀರಶೈವ ಸಮುದಾಯ ಭವನದಲ್ಲಿ ನಡೆಯಬೇಕಿದ್ದ ವಿವಾಹವನ್ನು ಕೋವಿಡ್–19 ಕಾರಣದಿಂದಾಗಿ ವಧುವಿನ ಮನೆಯಲ್ಲಿ ಸರಳವಾಗಿ ನಡೆಸಲಾಯಿತು.
ಬೇಲೂರು ಪಟ್ಟಣದ ಗುರಪ್ಪಗೌಡರ ಬೀದಿಯ ಮಮತಾ ಮತ್ತು ಕಲ್ಲೇಶಾಚಾರ್ ಅವರ ಪುತ್ರಿ ರೇಖಾ ಮತ್ತು ನೆಹರು ನಗರದ ಪ್ರಮೀಳಾ ಮತ್ತು ಪರಮೇಶಾಚಾರ್ ಅವರ ಪುತ್ರ ನಿಶಾಂತ್‌ರ ವಿವಾಹವನ್ನು 6 ತಿಂಗಳ ಹಿಂದೆಯೇ ಪಟ್ಟಣದ ವೀರಶೈವ ಸಮುದಾಯ ಭವನದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕೋವಿಡ್ 19ರ ಹಿನ್ನೆಲೆಯಲ್ಲಿ ಬೇಲೂರು ಪಟ್ಟಣದಲ್ಲಿ ಲಾಕ್ ಡೌನ್ ಇದ್ದ ಕಾರಣ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿದ್ದ ಮದುವೆಯನ್ನು ರದ್ದುಪಡಿಸಿ ವಧುವಿನ ಮನೆಯಲ್ಲಿ ಭಾನುವಾರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ನಡೆಸಲಾಯಿತು.
ಸಾಂಪ್ರದಾಯಿಕವಾಗಿ ನಡೆದ ವಿವಾಹ ಕಾರ್ಯದಲ್ಲಿ ವರ ಮತ್ತು ವಧುವಿನ ಕಡೆಯ ಬೆರಳಣಿಕೆಯಷ್ಟು ಬಂಧುಗಳು ಭಾಗವಹಿಸಿದ್ದರು. ಮದುವೆ ಸಂದರ್ಭದಲ್ಲಿ ವರ ಮತ್ತು ವಧು ಸೇರಿದಂತೆ ಭಾಗವಹಿಸಿದ್ದವರೆಲ್ಲಾ ಮುಖಗಸುಗಳನ್ನು ತೊಟ್ಟಿದ್ದರು. ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ವಿವಾಹ ಕಾರ್ಯ ನಡೆಸಲಾಯಿತು.