ಸಕಲೇಶಪುರ(ಹಾಸನ) : ತಾಪಂ ಅಧ್ಯಕ್ಷೆಯೇ ರಾಜಕೀಯ ಲಾಭಕ್ಕಾಗಿ ತನ್ನ ಪತಿಯನ್ನು ಅಪಹರಿಸಿದ್ದಾರೆ ಎಂದು ತಾಪಂ ಸದಸ್ಯರೊಬ್ಬರ ಪತ್ನಿ ಆರೋಪಿಸಿದ್ದಾರೆ.
ಶನಿವಾರ ಮಾತನಾಡಿದ ಐಗೂರು ಗ್ರಾಮದ ನಿವಾಸಿ ಲೀಲಾ ಶಿವಪ್ಪ ಈ ಬಗ್ಗೆ ಆರೋಪಿಸಿದ್ದಾರೆ. ತಾಪಂ ಸದಸ್ಯರಾಗಿರುವ ನನ್ನ ಪತಿ ಶಿವಪ್ಪ, ಗುರುವಾರ ಮಧ್ಯಾಹ್ನ ಹೆತ್ತೂರು ಗ್ರಾಮಕ್ಕೆ ಹೋಗಿಬರುವುದಾಗಿ ಹೇಳಿ ಮನೆಯಿಂದ ಹೊರ ಹೋದವರು, ಮನೆಗೆ ವಾಪಸ್ ಹಿಂತಿರುಗಿಲ್ಲ. ಈ ಸಂಬಂಧ ಶುಕ್ರವಾರ ಯಸಳೂರು ಪೊಲೀಸ್ ಠಾಣೆಯಲ್ಲಿ ಕಾಣೆ ಪ್ರಕರಣ ದಾಖಲಿಸಿದ್ದೆವು. ಆದರೆ, ಶನಿವಾರ ಮುಂಜಾನೆ ಕೆಲವು ಬಿಜೆಪಿ ಮುಖಂಡರು ನಮ್ಮ ಮನೆಗೆ ಬಂದು ನಿಮ್ಮ ಪತಿ ನಮ್ಮೊಂದಿಗಿದ್ದಾರೆ ಎಂದು ಹೇಳಿದ್ದಾರೆ ಎಂದರು.
ತಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯದ ಪತ್ರಕ್ಕೆ ನನ್ನ ಪತಿ ಸಹಿ ಹಾಕಿರುವುದರಿಂದ ಅವರನ್ನು ಅಪಹರಿಸಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಆದ್ದರಿಂದ, ತಕ್ಷಣವೇ ನನ್ನ ಪತಿಯನ್ನು ಬಿಡುಗಡೆ ಮಾಡಬೇಕು. ತಪ್ಪಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.