ಹಾಸನ: ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ನಡೆಯಬೇಕಿದ್ದ ಸಭೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರ ನಡುವಿನ ಗಲಾಟೆಯಿಂದಾಗಿ ರಣರಂಗವಾದ ಘಟನೆ ಹಾಸನ ಜಿಲ್ಲಾ ಪಂಚಾಯತಿಯ ಹೊಯ್ಸಳ ಸಭಾಂಗಣದಲ್ಲಿ ನಡೆಯಿತು.
ಪ್ರತಿಬಾರಿಯು ಜೆಡಿಎಸ್ನವರು ಕೆಡಿಪಿ ಸಭೆಗೆ ಗೈರು ಹಾಜರಾಗುತ್ತಿದ್ದಾರೆ ಎಂಬ ಆರೋಪವನ್ನು ಕಾಂಗ್ರೆಸ್ ಮಾಡುತ್ತಿತ್ತು. ಆದರೆ ನಿನ್ನೆ ಕರೆದಿದ್ದ ಕೆಡಿಪಿ ಸಭೆಗೆ ಶಾಸಕರು ಸೇರಿದಂತೆ ಜಿಲ್ಲಾ ಪಂಚಾಯಿತಿಯ ಜೆಡಿಎಸ್ ಸದಸ್ಯರೆಲ್ಲರೂ ಕೂಡ ಹಾಜರಾಗಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಾರೆ ಎಂಬ ನಿರೀಕ್ಷೆಯನ್ನು ಹೊತ್ತಿದ್ದ ಅಧಿಕಾರಿಗಳಿಗೆ, ರಾಜಕೀಯ ನಾಯಕರುಗಳ ಕಚ್ಚಾಟವನ್ನು ನೋಡುತ್ತಲೇ ಸುಮ್ಮನಾಗಿಬಿಟ್ಟರು.
ಜಿಲ್ಲಾ ಪಂಚಾಯಿತಿಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ಕೆಲವು ಕಾಮಗಾರಿಗಳಿಗೆ ಅನುಮೋದನೆ ಪಡೆಯಲು ಹಲವು ತಿಂಗಳುಗಳಿಂದ ಜೆಡಿಎಸ್ ಸದಸ್ಯರುಗಳು ಗೈರುಹಾಜರಾಗುತ್ತಾ ಬಂದಿದ್ದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಕಾಂಗ್ರೆಸ್ ಮಾತಿಗೆ ಕೆಂಡಾಮಂಡಲವಾದ ಜೆಡಿಎಸ್ ಸದಸ್ಯರುಗಳು, ನೀವು ಸಭೆಯನ್ನು ಕರೆಯುವಾಗ ವಿಚಾರವನ್ನು ತಿಳಿಸದೆ ಸಭೆ ಕರೆಯುತ್ತೀರಿ. ಗುಂಡನ ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ಕೋವಿಡ್ ಸಭೆ ಕರೆದು ಅದರಲ್ಲಿ ಬೇರೆ ಬೇರೆಯ, ತಮಗೆಬೇಕಾದ ಕಾಮಗಾರಿಗಳಿಗೆ ಸಹಿ ಹಾಕಲು ನಮ್ಮನ್ನು ಕರೆಯುವುದು ಎಷ್ಟು ಸರಿ ಎಂದು ಆರೋಪ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೆಲ ಕಾಂಗ್ರೆಸ್ ಸದಸ್ಯರು ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ಏಳು ದಿನಗಳ ಮುಂಚೆಯೇ ತಮಗೆ ಸಭೆಯ ಮಾಹಿತಿ ನೀಡಲಾಗುತ್ತದೆ. ವಿಶೇಷ ಸಭೆಯಲ್ಲಿ ಕೆಲವು ಕಾಮಗಾರಿಗಳ ಬಗ್ಗೆ ಚರ್ಚಿಸ ಬಹುದಾಗಿರುತ್ತದೆ ಎಂದು ತಮಗೂ ತಿಳಿದಿರುತ್ತೆ. ಕೋವಿಡ್ ಸಂದರ್ಭದಲ್ಲಿ ವಿಶೇಷ ಸಭೆ ಎಂದು ನಮೂದಿಸುವುದು ಅದಕ್ಕೆ ಎಂದಾಗ, ಇದು ಸರಿಯಾದ ಮಾರ್ಗವಲ್ಲ. ಸಭೆಯ ಕೆಲವು ಮುಖ್ಯ ವಿಚಾರಗಳನ್ನ ನಮ್ಮ ಗಮನಕ್ಕೆ ತರಬೇಕು, ಅದರ ಬಗ್ಗೆ ನಾವು ಕೂಡ ನಮ್ಮ ಕ್ಷೇತ್ರದ ಪ್ರತಿನಿಧಿಗಳಿಗೆ ಜನಸಾಮಾನ್ಯರೊಂದಿಗೆ ಚರ್ಚಿಸಿ ಇಲ್ಲಿ ಉತ್ತರ ಕೊಡಬೇಕಾಗುತ್ತದೆ. ಹಾಗಾಗಿ ಸಭೆಗೆ ತಾವು ಗೈರು ಹಾಜರಾಗುತ್ತಿದ್ದು, ಆದರೆ ಅಭಿವೃದ್ಧಿ ವಿಚಾರದಲ್ಲಿ ನಾವು ಯಾವುದೇ ಅಡ್ಡಿಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಇದಾದ ಬಳಿಕ ಕೆಲವು ಅಭಿವೃದ್ಧಿ ವಿಚಾರದಲ್ಲಿ ಮತ್ತು ವೈಯಕ್ತಿಕವಾಗಿ ಜೆಡಿಎಸ್ ಸದಸ್ಯರುಗಳ ತೇಜೋವಧೆಯಾಗಿದೆ. ಹಾಗಾಗಿ ಅಧ್ಯಕ್ಷರು ಕ್ಷಮೆಯಾಚಿಸಬೇಕು ಎಂದು ಜೆಡಿಎಸ್ ಸದಸ್ಯರುಗಳು ಮತ್ತು ಅರಸಿಕೆರೆ ಶಾಸಕ ಶಿವಲಿಂಗೇಗೌಡ ಪಟ್ಟು ಹಿಡಿದಾಗ, ಇದಕ್ಕೆ ಪ್ರತ್ಯುತ್ತರ ನೀಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜು, ಯಾರು ಕ್ಷಮೆ ಕೇಳಬೇಕೆಂದು ಕೆಲವು ಕ್ಷಣಗಳಲ್ಲಿ ಗೊತ್ತಾಗಲಿದೆ. ತಪ್ಪು ನಮ್ಮಿಂದ ಆಗಿದೆಯಾ ಅಥವಾ ನಿಮ್ಮಿಂದ ಆಗಿದೆಯೇ ಎಂಬುದು ಗೊತ್ತಾಗಲಿದೆ. ನಂತರ ಕ್ಷಮೆ ಯಾರು ಕೇಳಬೇಕೆಂದು ನಿಮಗೆ ಗೊತ್ತಾಗುತ್ತದೆ ಎಂದರು.
ಒಟ್ಟಾರೆ ಇಷ್ಟು ದಿನ ಕೋವಿಡ್ ನಡುವೆ ಮೌನವಾಗಿ ಕೇವಲ ಕಾಂಗ್ರೆಸ್ ಸದಸ್ಯರುಗಳು ಮತ್ತು ಓರ್ವ ಬಿಜೆಪಿ ಸದಸ್ಯರ ನಡುವೆ ನಡೆಯುತ್ತಿದ್ದ ಸಾಮಾನ್ಯ ಸಭೆ, ಜೆಡಿಎಸ್ ಸದಸ್ಯರು ಬಂದ ಬಳಿಕ ಕೆಡಿಪಿ ಸಭೆ, ಮಾತಿನ ಸಮರಾಂಗಣದೊಳಗೆ ಮುಂದುವರೆದಂತಾಗಿದೆ.