ಅರಕಲಗೂಡು: ಕೊಣನೂರಿನ ವ್ಯಕ್ತಿಯೊಬ್ಬರು ವಾಣಿಜ್ಯ ಕಟ್ಟಡವನ್ನು ನಿರ್ಮಿಸುತ್ತಿದ್ದು ಪಕ್ಕದಲ್ಲೇ ಇರುವ ಕಟ್ಟೇಪುರ ಎಡದಂಡೆ ನಾಲೆಯ ರಸ್ತೆಯನ್ನು ಮಣ್ಣಿನಿಂದ ಮುಚ್ಚಿದ್ದಾರೆ. ಇನ್ನು ಈ ಮುಚ್ಚಿರುವ ಮಣ್ಣು ನಾಲೆಗೆ ಬೀಳುತ್ತಿ,ದ್ದು ನೀರಿನ ಹರಿವಿಗೆ ಅಡಚಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಲಾ ಏರಿ ಒತ್ತುವರಿ ಕುರಿತಂತೆ ಕ್ರಮ ಕೈಗೊಳ್ಳಲು ಶಾಸಕ ಎ.ಟಿ.ರಾಮಸ್ವಾಮಿ ಸೂಚನೆ ನೀಡಿದ್ದಾರೆ.
ಇನ್ನು ಈ ಕುರಿತು ಅವರು ಮಾತನಾಡಿದ ಅವರು, ಕಟ್ಟಡದಿಂದ ತ್ಯಾಜ್ಯದ ನೀರನ್ನು ನಾಲೆಗೆ ಬಿಡುವ ಉದ್ದೇಶದಿಂದ ಪೈಪನ್ನು ಅಳವಡಿಸಲಾಗಿದೆ. ಇದಕ್ಕೆ ಯಾವುದೇ ಇಲಾಖೆಯ ಅನುಮತಿಯನ್ನು ಪಡೆದಿಲ್ಲ. ಸರ್ಕಾರಿ ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ, ಕಂದಾಯ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಒತ್ತುವರಿ ಮಾಡಿರುವ ಸ್ಥಳಕ್ಕೆ ನೀರಾವರಿ ಇಲಾಖೆಯ ಇಂಜಿನಿಯರ್ ವೆಂಕಟೇಶ್, ಕಂದಾಯ ನಿರೀಕ್ಷಿಕ ಕಿರಣ್ ಕುಮಾರ್, ಗ್ರಾ.ಪಂ ಪಿಡಿಒ ಗಣೇಶ್, ತಾ.ಪಂ ಇಓ ಎಸ್. ರವಿಕುಮಾರ್ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಣ್ಣನ್ನು ಕಾಲುವೆಗೆ ಬೀಳುವಂತೆ ಏರಿಯ ಮೇಲೆ ತುಂಬುತ್ತಿದ್ದ ಜೆಸಿಬಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಪ್ರಕರಣ ಕುರಿತು ಗ್ರಾ.ಪಂ ಮತ್ತು ನೀರಾವರಿ ಇಲಾಖೆಯು ದೂರು ನೀಡಿದೆ. ಇನ್ನು ನಾಲೆಗೆ ಬೀಳುತ್ತಿರುವ ಮಣ್ಣನ್ನು ತೆಗೆದು, ಒತ್ತುವರಿಯಾಗಿರುವ ಸ್ಥಳವನ್ನು ತೆರವು ಮಾಡುವವರೆಗೆ ಕಟ್ಟಡ ನಿರ್ಮಾಣಕ್ಕೆ ನೀಡಿರುವ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವ ಕುರಿತು ನೋಟಿಸ್ ನೀಡಲಾಗುತ್ತದೆ ಎಂದು ಗ್ರಾ.ಪಂ ಪಿಡಿಒಹದ ಗಣೇಶ್ ತಿಳಿಸಿದರು.