ಅರಸೀಕೆರೆ: ಪ್ರಮಾಣ ವಚನ ಸ್ವೀಕರಿಸುವಾಗ ನೆಪ ಮಾತ್ರಕ್ಕೆ ಹಸಿರು ಶಾಲು ಹಾಕಿಕೊಂಡರೆ ಆಗದು. ಸರ್ಕಾರದ ಯೋಜನೆಗಳು ರೈತರ ಪರವಾಗಿದ್ದರೆ ಮಾತ್ರ ಅನ್ನದಾತನ ಋಣ ತೀರಿಸಿದಂತೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.
ಕೊಬ್ಬರಿಗೆ ಸೂಕ್ತ ಬೆಲೆ ಸಿಗದೆ ರೈತರಿಗೆ ಅನ್ಯಾಯವಾಗುತ್ತಿದೆ. ಕೊಬ್ಬರಿಗೆ ಸಹಾಯಧನ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಶಾಸಕ ಶಿವಲಿಂಗೇಗೌಡ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಇಂದು ಮೌನ ಪ್ರತಿಭಟನೆ ನಡೆಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ನಗರದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿ ಬಳಿಕ ಮಾತನಾಡಿದ ಅವರು, ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲರಿಗೂ ಕೊಬ್ಬರಿಗೆ ಸೂಕ್ತ ಬೆಲೆ ಜೊತೆಗೆ ಸಹಾಧನ ನೀಡುವಂತೆ ಒತ್ತಾಯ ಮಾಡಿದ್ದರೂ ಪ್ರಯೋಜನವಾಗಿಲ್ಲ. ರೈತರ ಪರವಾಗಿ ಹೋರಾಟ ಅನಿವಾರ್ಯವಾಗಿದೆ. ನಫೆಡ್ ಮೂಲಕ ಕೊಬ್ಬರಿ ಖರೀದಿಗೆ ಮುಂದಾಗಿರುವ ಸರ್ಕಾರ ರೈತರಿಗೆ ನಿಗದಿತ ಸಮಯದಲ್ಲಿ ಮಾಹಿತಿ ನೀಡದೆ ಕೇವಲ ಒಂದು ತಿಂಗಳ ಅವಧಿಯಲ್ಲಿ ಕೊಬ್ಬರಿ ಖರೀದಿಗೆ ಸಮಯ ನೀಡಿದೆ. ಇದರಿಂದ ಲಕ್ಷಾಂತರ ರೈತರು ಮಾಹಿತಿ ಇಲ್ಲದೆ ನಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದರು.
ನಫೆಡ್ ಮೂಲಕ ಖರೀದಿ ಮಾಡುವ ಕೊಬ್ಬರಿಗೆ ಕ್ವಿಂಟಾಲ್ಗೆ ಕನಿಷ್ಠ 1200 ರೂ. ಸಹಾಯಧನವನ್ನು ಕೂಡಲೇ ಘೋಷಣೆ ಮಾಡಬೇಕು. ಇಲ್ಲವಾದರೆ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಕೂರುತ್ತೇನೆ. ಈಗ ಕೊರೊನಾ ಇರುವುದರಿಂದ ಆ ನೆಪದಲ್ಲಿ ಸರ್ಕಾರ ಬಚಾವ್ ಆಗಿದೆ. ರೈತರ ಸಂಕಷ್ಟಕ್ಕೆ ನೆರವಾಗಲು ಮುಂದಾಗದಿದ್ದರೆ ರಾಜ್ಯಾದ್ಯಂತ ಸಂಚಲನ ಮೂಡಿಸುವಂತೆ ಹೋರಾಟ ಮಾಡುತ್ತೇವೆ.
ರಾಜ್ಯದ ಯಾವುದೇ ಶಾಸಕರನ್ನು ಬಿಜೆಪಿಯವರು ಸುಮ್ಮನಿರಿಸಬಹುದು. ಆದರೆ ಈ ಶೀವಲಿಂಗೇಗೌಡನ ಬಾಯಿ ಮುಚ್ಚಿಸಲು ಸಾದ್ಯವಿಲ್ಲ. ಹಿಂದೆ ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದಾಗ ಕೊಬ್ಬರಿ ದರ ಕುಸಿದ ಸಂದರ್ಭದಲ್ಲಿ ನಾಫೆಡ್ ಮುಖಾಂತರ ಕೊಬ್ಬರಿ ಖರೀದಿಸಿ ಪ್ರತಿ ಕ್ವಿಂಟಾಲ್ಗೆ 700 ರೂ. ಸಹಾಯಧನ ನೀಡಿದ್ದರು. ಆಗ 92,720 ಕ್ವಿಂಟಾಲ್ ಕೊಬ್ಬರಿ ಖರೀದಿಯಾಗಿತ್ತು. ಅದೇ ರೀತಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ 1000 ಸಹಾಯಧನ ನೀಡಿ, 2,95,352 ಕ್ಚಿಂಟಾಲ್ ಕೊಬ್ಬರಿ ಖರೀದಿಸಿದ್ದರು ಎಂದರು.
ಆದರೆ ಇಂದು ಸಹಾಯಧನ ಘೋಷಣೆ ಮಾಡದೆ ನಫೆಡ್ ಮೂಲಕ ಕೊಬ್ಬರಿ ಖರೀದಿಸಲು ಮುಂದಾಗಿದೆ. ಈಗಲೂ ಸರ್ಕಾರಕ್ಕೆ ನಾವು ವಿನಮ್ರವಾಗಿ ಮನವಿ ಮಾಡುತ್ತೇವೆ. ಕೂಡಲೇ ಕೊಬ್ಬರಿಗೆ ಸಹಾಯ ಧನ ಘೋಷಣೆ ಮಾಡಬೇಕು. ಇಲ್ಲವಾದರೆ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.