ಸಕಲೇಶಪುರ: ಮಂಗಳವಾರ ನಡೆಯಲಿರುವ ಪುರಸಭಾ ಅಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದ ನೀಡದಂತೆ ಮಾಡಲು ಜೆಡಿಎಸ್ ತನ್ನ ಸದಸ್ಯರುಗಳನ್ನು ತಾಲೂಕಿನ ರೆಸಾರ್ಟ್ವೊಂದಕ್ಕೆ ಶಾಸಕ ಹೆಚ್.ಕೆ ಕುಮಾರಸ್ವಾಮಿ ನೇತೃತ್ವದಲ್ಲಿ ಕರೆದೊಯ್ಯಲಾಗಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಹೆಚ್.ಕೆ ಕುಮಾರಸ್ವಾಮಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆದ ನಂತರ ಸದಸ್ಯರುಗಳು ತಾಲೂಕಿನ ರೆಸಾರ್ಟ್ ವೊಂದಕ್ಕೆ ತೆರಳಿದರು. ಒಟ್ಟು23 ಸದಸ್ಯ ಬಲದ ಸಕಲೇಶಪುರ ಪುರಸಭೆಯಲ್ಲಿ ಜೆಡಿಎಸ್ 14, ಕಾಂಗ್ರೆಸ್ 4, ಬಿಜೆಪಿ 2, ಪಕ್ಷೇತರ 3 ಸ್ಥಾನಗಳನ್ನು ಹೊಂದಿದ್ದು ಅಧಿಕಾರಕ್ಕೆ ಬೇಕಾದ ಸರಳ ಬಹುಮತವನ್ನು ಹೊಂದಿದೆ. ಶಾಸಕರ ಒಂದು ಮತ ಹಾಗೂ ಪಕ್ಷೇತರ ಅಭ್ಯರ್ಥಿಯೋರ್ವರು ಜೆಡಿಎಸ್ ಗೆ ಬೆಂಬಲ ನೀಡಿರುವುದರಿಂದ ಒಟ್ಟು 16ಮತಗಳನ್ನು ಖಚಿತವಾಗಿ ಹೊಂದಿದೆ.
ಅಧ್ಯಕ್ಷ ಸ್ಥಾನ ಎಸ್.ಸಿಗೆ ಮೀಸಲಾದರೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಅಧ್ಯಕ್ಷ ಸ್ಥಾನಕ್ಕೆ11ನೇ ವಾರ್ಡ್ ನ ಕಾಡಪ್ಪ ಬಹುತೇಕವಾಗಿ ಅಧ್ಯಕ್ಷರಾಗುವುದು ಖಚಿತವಾಗಿದೆ ಉಪಾಧ್ಯಕ್ಷ ಸ್ಥಾನಕ್ಕೆ 5ನೇ ವಾರ್ಡ್ ಜ್ಯೋತಿ, 7ನೇ ವಾರ್ಡ್ ಜರೀನಾ, 1ನೇ ವಾರ್ಡ್ ಜರೀನಾ , 21 ನೇ ವಾರ್ಡ್ ವಿದ್ಯಾ ಹಾಗೂ 17ನೇ ವಾರ್ಡ್ ಪಕ್ಷೇತರ ಅಭ್ಯರ್ಥಿ ಸರಿತಾ ಗಿರೀಶ್ ನಡುವೆ ಪೈಪೋಟಿಯಿದ್ದು ಬಹುತೇಕವಾಗಿ ಅಧಿಕಾರ ಹಂಚುವ ಸಾಧ್ಯತೆಯಿದೆ.
ಕಾಂಗ್ರೆಸ್ನಿಂದ ಗೆಲುವು ಸಾಧಿಸಿರುವ 10ನೇ ವಾರ್ಡ್ ಸದಸ್ಯ ಅಣ್ಣಪ್ಪ ಜೆಡಿಎಸ್ ನ ಕೆಲವು ಸದಸ್ಯರ ಬೆಂಬಲ ಪಡೆದು ಅಧಿಕಾರಕ್ಕೇರುವ ಯತ್ನ ನಡೆಸಿದ್ದರು. ಆದರೆ ಜೆಡಿಎಸ್ ಹೈಕಮಾಂಡ್ ಕಾಡಪ್ಪರವರ ಪರ ನಿಂತಿರುವುದರಿಂದ ಯಾವುದೇ ಗೊಂದಲವಿಲ್ಲದೆ ಕಾಡಪ್ಪ ಅಧ್ಯಕ್ಷ ಪಟ್ಟವನ್ಮು ಅಲಂಕರಿಸುವ ಎಲ್ಲಾ ಸಾಧ್ಯತೆಯಿದೆ.