ಸಕಲೇಶಪುರ: ಕೊರೊನಾ ವೈರಸ್ ತಡೆಗಟ್ಟಲು ಪ್ರಧಾನಿ ಮೋದಿ ಭಾನುವಾರ ಕರೆ ಕೊಟ್ಟಿದ್ದ ಜನತಾ ಕರ್ಫ್ಯೂಗೆ ಸಕಲೇಶಪುರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿ-75 ಸಕಲೇಶಪುರದ ಮುಖಾಂತರ ಹಾದು ಹೋಗಿದ್ದು, ಸದಾ ಜನದಟ್ಟಣೆಯಿಂದ ಕೂಡಿರುತ್ತಿದ್ದ ಪಟ್ಟಣ ಇಂದು ಕರ್ಫ್ಯೂನಿಂದಾಗಿ ಬಿಕೋ ಎನ್ನುತ್ತಿತ್ತು. ಮುಂಜಾನೆಯಿಂದಲೇ ಎಲ್ಲಾ ಅಂಗಡಿ ಮುಗ್ಗಟ್ಟು, ಹೋಟೆಲ್‌ಗಳು, ಬೇಕರಿಗಳು, ದಿನಸಿ ಅಂಗಡಿಗಳು ಬಾಗಿಲು ಮುಚ್ಚಿದ್ದವು.
ಮೆಡಿಕಲ್, ಖಾಸಗಿ ಕ್ಲಿನಿಕ್‌ಗಳು, ಪೆಟ್ರೋಲ್ ಬಂಕ್‌ಗಳು ಮಾತ್ರ ತೆರೆದಿದ್ದವು. ಆದರೆ, ವ್ಯಾಪಾರ ಮಾತ್ರ ನೀರಸವಾಗಿತ್ತು. ಸರಕು ಸಾಗಾಟ ವಾಹನ, ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ಸಂಚಾರಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಅಲ್ಲಲ್ಲಿ ಮಾತ್ರ ಆಟೋಗಳು ತಿರುಗಾಡುತ್ತಿರುವುದು ಕಂಡು ಬರುತ್ತಿತ್ತು.
ಜನತೆ ಮನೆಯಲ್ಲೆ ಇದ್ದು, ಕುಟುಂಬದೊಂದಿಗೆ ಬೆರೆತು ಸಂತೋಷದ ಕ್ಷಣಗಳನ್ನು ಅನುಭವಿಸಿದರು. ಕಳೆದ ಹಲವಾರು ದಶಕಗಳಿಂದ ಅನೇಕ ಬಾರಿ ಭಾರತ ಬಂದ್, ರಾಜ್ಯ ಬಂದ್ ನಡೆದಿದ್ದರೂ ಈ ರೀತಿಯ ಬೆಂಬಲ ಸಿಕ್ಕಿರಲಿಲ್ಲ. ಅದರಲ್ಲೂ ಪಟ್ಟಣದ 2 ಪ್ರಮುಖ ರಸ್ತೆಗಳಾದ ಆಜಾದ್ ರಸ್ತೆ, ಅಶೋಕ ರಸ್ತೆಗಳು ಸಹ ಸಂಪೂರ್ಣ ಬಂದ್ ಆಗಿದ್ದವು.