ಹಾಸನ: ವಿದ್ಯುತ್ ಕಂಬವನ್ನು ತೆರವುಗೊಳಿಸದೇ ಕಾಂಕ್ರೀಟ್ ರಸ್ತೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಎತ್ತಿನಹೊಳೆ ಕಾರ್ಯಪಾಲಕ ಅಭಿಯಂತರರಿಗೆ ವೇದಿಕೆಯಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರು ಚಳಿ ಬಿಡಿಸಿದ ಘಟನೆ ಹಾಸನ ಜಿಲ್ಲೆಯ ಅಂಗಡಿಯಲ್ಲಿ ಗ್ರಾಮದಲ್ಲಿ ನಡೆಯಿತು.
ಹಗರೆ ಗ್ರಾಮ ಪಂಚಾಯಿತಿಗೆ ಒಳಪಡುವ ಅಂಗಡಿಹಳ್ಳಿ ಗ್ರಾಮದಲ್ಲಿ ಇಂದು ಆಯೋಜನೆ ಮಾಡಲಾಗಿದ್ದ ಜನಸ್ಪಂದನ ಕಾರ್ಯಕ್ರಮದ ವೇದಿಕೆಯಲ್ಲಿ ಹಗರೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಮಂಜುನಾಥ್ ವಿದ್ಯುತ್ ಕಂಬಗಳನ್ನು ತೆರವುಗೊಳಿಸದೇ ಕಾಂಕ್ರೀಟ್ ಕಾಮಗಾರಿ ನಿರ್ಮಾಣ ಮಾಡುತ್ತಿದ್ದು, ಇದರಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದೆ ಇದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಆರೋಪ ಮಾಡಿದ್ದರು.
ಇದರ ಜೊತೆಗೆ ಒಬ್ಬ ಕಾರ್ಯಪಾಲಕ ಅಭಿಯಂತರ ಜೆಡಿಎಸ್ ಪರವಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಇದೇ ವೇಳೆ ನೆರೆದಿದ್ದ ಸಾರ್ವಜನಿಕರು ಕೂಡ ಆರೋಪಿಸಿದಾಗ ಕೆಂಡಾಮಂಡಲವಾದ ಜಿಲ್ಲಾ ಉಸ್ತುವಾರಿ ಸಚಿವ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ತಾವು ಕಾರ್ಯಪಾಲಕ ಇಂಜಿನಿಯರ್ ಕಾಮಗಾರಿ ಮಾಡುವ ಬಗ್ಗೆ ಅರಿವಿಲ್ಲದವೇ.. ? ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ಮೊದಲು ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಕಾಮಗಾರಿ ಮಾಡಬೇಕಲ್ಲ, ಡಬಲ್ ಬಿಲ್ ಮಾಡಲು ಈ ರೀತಿ ಮಾಡುತ್ತಿದ್ದೀರಿಯೇ.. ? ತಕ್ಷಣ ನನಗೆ ಸಂಜೆಯೊಳಗೆ ಇರೋ ಮಾಹಿತಿಯನ್ನು ನೀಡಬೇಕು ಜೊತೆಗೆ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದರೆ ಕೂಡಲೇ ವಿದ್ಯುತ್ ಕಂಬವನ್ನು ತೆರವುಗೊಳಿಸಿ ನಂತರ ಕಾಮಗಾರಿ ಆರಂಭಿಸಬೇಕು ಎಂದು ವೇದಿಕೆಯಲ್ಲಿ ಕಾರ್ಯಪಾಲಕ ಅಭಿಯಂತರರಿಗೆ ಸಚಿವರು ತರಾಟೆ ತೆಗೆದುಕೊಂಡರು.