ಹಾಸನ: ನ್ಯಾ. ಎ.ಜೆ. ಸದಾಶಿವ ಆಯೋಗದ ಒಳಮೀಸಲಾತಿ ವರದಿ ಜಾರಿಗೊಳಿಸಲು ಆಗ್ರಹಿಸಿ ಹಾಗೂ ಪಿಟಿಸಿಎಲ್ ಕಾಯಿದೆಗೆ ಸುಗ್ರಿವಾಜ್ಞೆ ತರಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಗೋವಿಂದರಾಜು, ಜನ ಸಮುದಾಯಗಳ ಸಾಮಾಜಿಕ ನ್ಯಾಯದ ಕೂಗು ಆಲಿಸಿದ ಸರ್ವೋಚ್ಚ ನ್ಯಾಯಾಲಯದ ಐದು ನ್ಯಾಯಾಧೀಶರ ಪೀಠವು ಇದೇ ಆಗಸ್ಟ್- 27 ರಂದು ಐತಿಹಾಸಿಕ ತೀರ್ಪನ್ನು ನೀಡಿದೆ. ಆ ಪ್ರಕಾರ ರಾಜ್ಯದ ಶಾಸನ ಸಭೆಗೆ ಪಂಜಾಬಿ ಮತ್ತು ಪಂಗಡಗಳ ಒಳಮೀಸಲಾತಿ ವರ್ಗೀಕರಣ ಮಾಡುವ ಅಧಿಕಾರವಿದೆ. ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಒಳಮೀಸಲಾತಿ ಜಾರಿಗೊಳಿಸಲು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಇದ್ದ ಅಡೆತಡೆ ಗಳೆಲ್ಲವೂ ಮುಕ್ತವಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ಸದ್ಯದಲ್ಲೇ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಮಂಡಿಸುವ ಮೂಲಕ ಪರಿಶಿಷ್ಟ ಜಾತಿಗಳಿಗಿರುವ ಮೀಸಲಾತಿಯಲ್ಲಿ ಒಳ ಮೀಸಲಾತಿಯ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.