ಹಾಸನ: ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ನಗರದಲ್ಲಿ ಬೃಹತ್ ತಮಟೆ ಚಳವಳಿ ನಡೆಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಚಳವಳಿಯು ಎನ್.ಆರ್. ವೃತ್ತ, ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ತಲುಪಿತು.
ಈ ವೇಳೆ ಮಾತನಾಡಿದ ದಲಿತ ಮುಖಂಡ ಅಂಬೂಗ ಮಲ್ಲೇಶ್, ಕಳೆದ ಆಗಸ್ಟ್ 27 ರಂದು, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ಪೀಠ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ಇದ್ದ ಅಡ್ಡಿ ಆತಂಕಗಳನ್ನು ದೂರ ಮಾಡಿತು. ಆ ಮೂಲಕ ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಮುಕ್ತ ಅವಕಾಶವಿದೆ ಎಂದು ತೀರ್ಪು ನೀಡಿದರು. ಹಾಗಾಗಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನ ಶೀಘ್ರ ಜಾರಿಗೊಳಿಸುವಂತೆ ಹಾಸನ ದಲಿತ ಸಮುದಾಯಗಳು ಒಟ್ಟಾಗಿ ಆಗ್ರಹಿಸುತ್ತಿದ್ದೇವೆ ಎಂದರು.
ಚಳವಳಿಯಲ್ಲಿ ಹೊಲೆಯ, ಮಾದಿಗ, ಛಲವಾದಿ, ಆದಿ ಕರ್ನಾಟಕ, ಆದಿ ದ್ರಾವಿಡ ಸಮುದಾಯದ ಜನರು ಭಾಗಿಯಾಗಿದ್ದರು.