ಹಾಸನ : ಜಿಲ್ಲೆಯಲ್ಲಿರುವ ಗ್ರಾಮಾಂತರ ಪ್ರದೇಶಗಳಲ್ಲಿ ಸಣ್ಣ ನದಿ ತೊರೆಗಳಲ್ಲಿ ಲಭ್ಯವಿರುವ ಮರಳಿನ ಬ್ಲಾಕ್‌ಗಳನ್ನು ಗುರುತಿಸಿ ಅಲ್ಲಿನ ಗ್ರಾಮ ಪಂಚಾಯತ್ ಮೂಲಕ ಅಕ್ಕ-ಪಕ್ಕದ ಗ್ರಾಮಗಳಿಗೆ ಮರಳು ದೊರೆಯುವಂತೆ ಮಾಡಿ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಎಲ್ಲಾ ತಹಶೀಲ್ದಾರರಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ಜಿಲ್ಲಾ ಮಟ್ಟದ ಮರಳು, ಕಲ್ಲು ಕ್ವಾರಿ ಹಾಗೂ ಕ್ರಷರ್‌ಗಳ ಟಾಸ್ಕ್ ಫೋರ್ಸ್ ಸಭೆ ನಡೆಸಿ ಮಾತನಾಡಿದ ಅವರು, ಗ್ರಾಮ ಮಟ್ಟದಲ್ಲಿ ಗುರುತಿಸಿರುವ ಮರಳು ಬ್ಲಾಕ್‌ಗಳಲ್ಲಿ ಒಂದು ತಾಲೂಕಿನಿಂದ ಮತ್ತೊಂದು ತಾಲೂಕಿಗೆ ಮರಳು ವಿಲೇವಾರಿ ಮಾಡುವಂತಿಲ್ಲ. ಆ ತಾಲೂಕಿನ ಗ್ರಾಮ ಪಂಚಾಯತ್‌ಗೆ ಒಳಪಡುವವರು ಮಾತ್ರ ಪಿಡಿಒ ಮೂಲಕ ಅನುಮತಿ ಪಡೆದು ಮರಳು ಪಡೆಯಬೇಕು ಎಂದರು.
ಮರಳು ಸಾಗಾಣಿಕಾ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಅದರಲ್ಲಿ ಅಕ್ರಮ ಎಸಗಿದ ವಾಹನಗಳಿಗೆ ಒಂದು ಬಾರಿಗೆ 10 ಸಾವಿರ ರೂ. ದಂಡ ವಿಧಿಸಿ ನೋಟಿಸ್ ಕಳುಹಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು. ಕೊರೊನಾ ಹಿನ್ನೆಲೆ ಎಲ್ಲಾ ಬ್ಲಾಕ್‌ಗಳಲ್ಲಿ ಶೇ.50ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮರಳು ಸಂಗ್ರಹಣೆ ಹಾಗೂ ವಿಲೇವಾರಿ ಮಾಡಲಾಗಿದೆ. ಇದರಲ್ಲಿ ಹೆಚ್ಚು ಜವಾಬ್ದಾರಿ ಮತ್ತು ಕಾಳಜಿ ತೋರಿಸಿದ್ದ ಗುತ್ತಿಗೆದಾರರಿಗೆ ಬಿಡ್ ಮೊತ್ತ ಪಾವತಿಯಲ್ಲಿ ಕೆಲವು ವಿನಾಯಿತಿಗಳನ್ನು ನೀಡಲು ಸೂಚಿಸಿದರು.
ವಾಹನದಲ್ಲಿ ಜಿಪಿಎಸ್ ಪರ್ಮೀಟ್ ಇಲ್ಲದೇ ಸಂಚರಿಸುವ ಮತ್ತು ಜಿಪಿಎಸ್ ಬದಲಿಸಿ ಅಕ್ರಮವಾಗಿ ಮರಳು ಸಾಗಿಸುತ್ತಿರುವ ವಾಹನಗಳು ದಂಡ ಪಾವತಿಸಿದ ನಂತರ ಅವರನ್ನು ಮತ್ತೆ ಈ ಸೇವೆಯಲ್ಲಿ ತೊಡಗದಂತೆ ನಿರ್ಬಂಧಿಸಿ ಎಂದಿದ್ದಾರೆ. ಅಲ್ಲದೆ ದಂಡ ಪಾವತಿಸಲು 20 ದಿನಗಳ ಕಾಲಾವಕಾಶ ನೀಡಿ ಪಾವತಿಸದಿದ್ದರೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಿ ಎಂದರು.
ಕ್ರಷರ್‌ಗಳು ಬಳಸುವ ಯಂತ್ರಗಳಲ್ಲಿ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಪರಿಶೀಲಿಸಿ ಹಾಗೂ ಮಾಲೀಕರು ಪೂರ್ಣ ದಾಖಲಾತಿಗಳನ್ನು ನೀಡಿದ್ರೆ ಅಂತಹವರ ಪರವಾನಗಿಯನ್ನು ಮುಂದುವರೆಸಿ ಇಲ್ಲವಾದಲ್ಲಿ ರದ್ದುಗೊಳಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು. ಕಲ್ಲು ಕ್ವಾರಿಗಳ ಸುತ್ತಮುತ್ತಲ ಪ್ರದೇಶಗಳನ್ನು ಪರಿಶೀಲಿಸಿ ಜನರಿಗೆ ತೊಂದರೆಯಾಗದಂತೆ ಅವುಗಳಲ್ಲಿ ಕಡಿಮೆ ಪ್ರಮಾಣದ ಬ್ಲಾಸ್ಟಿಂಗ್ ಮಾಡುವಂತೆ ಸೂಚನೆ ನೀಡಿ ಎಂದು ತಿಳಿಸಿದರು.