ಹಾಸನ: ಕೆಂಪೇಗೌಡರ ಪ್ರತಿಮೆ ಅನಾವರಣದ ವಿಚಾರದಲ್ಲಿ ಯಾರು ಏನೇನು ಮಾಡಿದರು ಎಂಬುದನ್ನು ಈಗ ವಿಶ್ಲೇಷಣೆ ಮಾಡುವುದಿಲ್ಲ. ಆ ವಿಚಾರವಾಗಿ ಏನು ಮಾತನಾಡುವುದಿಲ್ಲ ಎನ್ನುವ ಮೂಲಕ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹುಟ್ಟೂರು ಹರದನಹಳ್ಳಿಯಲ್ಲಿ ಈಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿರಿಯ ಪತ್ರಕರ್ತರು ಒಬ್ಬರು ಒಂದು ಟ್ವೀಟ್ ಮಾಡಿದ್ದಾರೆ. ಅದು ದೇಶಾದ್ಯಂತ ಚರ್ಚೆಯಾಗಿದೆ. ಅದಕ್ಕಿಂತ ಹೆಚ್ಚಿಗೆ ನಾನು ಹೇಳುವುದಿಲ್ಲ. ಸಮಯ ಬಂದಾಗ ಮಾತನಾಡುತ್ತೇನೆ. ಈಗ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ ಅದನ್ನು ಮಾಡುತ್ತೇನೆ. ಜಿಲ್ಲಾ ಪ್ರವಾಸ ಮುಗಿಸಿ ಪಾರ್ಲಿಮೆಂಟ್ಗೆ ಹೋಗ್ತೀನಿ. ಅಲ್ಲಿ ಮಾತನಾಡುತ್ತೇನೆ ಎಂದರು.
ಹಾಸನ ಜಿಲ್ಲೆ ಜೆಡಿಎಸ್ ಭದ್ರಕೋಟೆ. ಹಾಸನದಲ್ಲಿ ಪಕ್ಷ ಸಂಘಟನೆ ಮಾಡಲು ಪ್ರತಿ ಕ್ಷೇತ್ರದಲ್ಲೂ ಒಂದೊಂದು ದಿನ ಪ್ರವಾಸ ಮಾಡುತ್ತೇನೆ. ಮುಂದಿನ ವಾರ ಪ್ರವಾಸ ಕಾರ್ಯಕ್ರಮ ತಿಳಿಸುತ್ತೇನೆ. ಜಿಲ್ಲೆಯಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕಿದೆ. ಹಾಗಾಗಿ ಕಾರ್ಯಕ್ರಮವನ್ನು ರೂಪಿಸುತ್ತಿದ್ದೇನೆ. ಇದಾದ ಬಳಿಕ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಪ್ರವಾಸ ಮಾಡುವುದಾಗಿ ಅವರು ದೇವೇಗೌಡರು ಹೇಳಿದರು.
ಇದನ್ನೂ ಓದಿ: ಕೆಂಪೇಗೌಡ ಪ್ರತಿಮೆ ಉದ್ಘಾಟನೆಗೆ ದೇವೇಗೌಡರಿಗಿಲ್ಲ ಆಹ್ವಾನ: ಪ್ರತಿಮೆ ಬಳಿ ಜೆಡಿಎಸ್ ಪ್ರತಿಭಟನೆ
ಪ್ರತಿ ವರ್ಷದಂತೆ ಹುಟ್ಟೂರಾದ ಹರದನಹಳ್ಳಿಗೆ ಆಗಮಿಸಿ ಈಶ್ವರನಿಗೆ ಪೂಜೆ ಸಲ್ಲಿಸುತ್ತೇನೆ. ಹಾಗಾಗಿ ಇಂದು ಕೂಡ ಪೂಜೆ ಸಲ್ಲಿಸಲು ಆಗಮಿಸಿದ್ದೇನೆ. ಅಂತಹ ಸಂದರ್ಭದಲ್ಲಿ ಹೆಚ್ಚು, ರಾಜಕೀಯ ಮಾತನಾಡುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವನ್ನು ಮಾತನಾಡುತ್ತೇನೆ ಎಂದರು.