ಹಾಸನ: ತಲೆ ನೋವೆಂದು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು ವ್ಯಕ್ತಿ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ ಎಂಬ ಆರೋಪ ನಗರದಲ್ಲಿ ಕೇಳಿ ಬಂದಿದೆ.
ತಾಲೂಕಿನ ಸಿಂಗನಕೆರೆ ಚಂದ್ರಶೆಟ್ಟಿ (47) ಮೃತ ವ್ಯಕ್ತಿ. ತಲೆನೋವು ಕಾಣಿಸಿಕೊಂಡ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ಈತನನ್ನು ಕರೆತಂದಿದ್ದಾರೆ. ಈ ವೇಳೆ ವೈದ್ಯರು ಸ್ಕ್ಯಾನ್ ಮಾಡಿಸಲು ಹೇಳಿದ್ದಾರೆ. ಚಂದ್ರಶೆಟ್ಟಿಯನ್ನು ತುರ್ತು ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡತ್ತಿದ್ದರೂ ಸಹ ರಿಪೋರ್ಟ್ ನಾರ್ಮಲ್ ಇರುವುದಾಗಿ ವೈದ್ಯರು ಹೇಳಿದ್ದರು. ನಂತರ ತಡವಾಗಿ ಬಂದ ವೈದ್ಯರು ರೋಗಿಯನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿ ಆಸ್ಪತ್ರೆಯ ಬಿಲ್ ಪಾವತಿಸಿದ ಬಳಿಕ ಮೃತಪಟ್ಟಿರುವುದಾಗಿ ಹೇಳಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಮೃತನ ಕುಟುಂಬದವರಾದ ದೇವಿಕಾ ಮಾತನಾಡಿ, ಸ್ಕ್ಯಾನ್ ರಿಪೋರ್ಟ್ ಬರಲಿ ಎಂದು ವೈದ್ಯರು ಹೇಳಿ ಆಸ್ಪತ್ರೆಗೆ ದಾಖಲು ಮಾಡಿಕೊಂಡು ಏನು ತೊಂದರೆಯಿಲ್ಲ ಎಂದಿದ್ದರು. ತಡವಾಗಿ ನಿಮಾನ್ಸ್ಗೆ ಕರೆದೂಯ್ಯಲು ಸೂಚಿಸಿದರು. ವೈದ್ಯರ ಸಲಹೆಯಂತೆ ಬಿಲ್ ಪಾವತಿ ಮಾಡಿದ ಬಳಿಕ ತುರ್ತು ವಾಹನದಲ್ಲಿ ಕರೆದೊಯ್ಯುವ ಸಮಯದಲ್ಲಿ ಪ್ರಾಣ ಹೋಗಿದೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ ಎಂದು ದೂರಿದ್ದಾರೆ.