ಹಾಸನ : ಪಾದರಾಯನಪುರದಲ್ಲಿ ಕೊರೊನ ವಾರಿಯರ್ಸ್ ಮೇಲೆ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ಸಿಗುವುದು ಬಾಕಿಯಿದೆ. ಕೊರೊನ ಜಾತಿ ನೋಡಿ ಬರಲ್ಲ. ಆತನನ್ನು ಶೀಘ್ರ ಬಂಧಿಸುತ್ತೇವೆ. ಆತನನ್ನು ಬಂಧಿಸಿದ ಬಳಿಕ ಘಟನೆಯ ಹಿಂದಿನ ನೈಜತೆ ತಿಳಿಯಲಿದೆ ಎಂದು ಗೃಹಸಚಿವ ಬಸವರಾಜು ಬೊಮ್ಮಾಯಿ ಹೇಳಿದರು.
ಹಾಸನದ ಹೊರವಲಯದಲ್ಲಿ ಮಾತನಾಡಿದ ಅವರು, ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡುವವರಿಗೆ ನೇರ ಎಚ್ಚರಿಕೆ ನೀಡಿದ ಗೃಹ ಸಚಿವರು, ಇಂದಿನಿಂದ ಸುಗ್ರೀವಾಜ್ಞೆ ಜಾರಿ ಮಾಡಲಾಗಿದೆ. ಎಲ್ಲಾ ಡಿಸಿ, ಎಸ್ಪಿಗಳಿಗೂ ಈಗಾಗಲೇ ಸೂಚನೆ ನೀಡಲಾಗಿದೆ. ಯಾರು ತಪ್ಪು ಮಾಡ್ತಾರೆ ಅವರ ವಿರುದ್ದ ಮುಲಾಜಿಲ್ಲದೆ ಕ್ರಮ ನಿಶ್ಚಿತ. ಆರೋಗ್ಯ ರಕ್ಷಣೆ ಹಾಗೂ ಭದ್ರತೆಯಲ್ಲಿ ತೊಡಗಿರುವವರಿಗೆ ಹೆಚ್ಚಿನ ಭದ್ರತೆ ಕೊಡಲು ತೀರ್ಮಾನ ಮಾಡಲಾಗಿದ್ದು, ಯಾರು ಆತ್ಮಸ್ಥೈರ್ಯ ಕಳೆದುಕೊಳ್ಳಬೇಕಿಲ್ಲ. ಯಾರಾದರೂ ಅಧಿಕಾರಿಗಳ, ವೈದ್ಯರ ಕರ್ತವ್ಯಕ್ಕೆ ಅಡ್ಡಿ ಮಾಡಿದ್ರೆ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಕಳೆದ ಮೂರು ದಿನಗಳಿಂದ ಕರ್ನಾಟಕದ ಕೊರೊನಾ ಗ್ರಾಫ್ ಕೆಳಗಿಳಿಯುತ್ತಿದೆ. 11 ಜಿಲ್ಲೆಯಲ್ಲಿ ಗ್ರೀನ್ ಝೋನ್ ವಾತಾವರಣ ಇದೆ. ಮೂರು ದಿನಗಳ ಹಿಂದೆ 38-40 ಇದ್ದದ್ದು ಈಗ 10-9 ರಷ್ಟು ಕಡಿಮೆಯಾಗಿದೆ. ಮೇ 3 ರ ಒಳಗೆ ಗ್ರಾಫ್ ಫ್ಲ್ಯಾಟ್ ಮಾಡೋ ಪ್ರಯತ್ನ ಮಾಡುತ್ತಿದ್ದೇವೆ.
ರಾಜ್ಯದಲ್ಲಿ ಪ್ರತಿನಿತ್ಯ ಮೂರು ಸಾವಿರ ಪರೀಕ್ಷೆ ನಡೆಸಲಾಗುತ್ತಿದೆ. ಈ ತಿಂಗಳ ಕೊನೆಯಲ್ಲಿ ದಿನಕ್ಕೆ ಹತ್ತು ಸಾವಿರ ಜನರ ಪರೀಕ್ಷೆ ನಡೆಸಲು ಸಿದ್ದತೆ ಆಗಿದೆ. ಹೀಗಾದರೆ ಸಂಪೂರ್ಣ ಸ್ಪಷ್ಟತೆ ನಮಗೆ ಸಿಗಲಿದೆ. ಗ್ರೀನ್ ಝೋನ್ ಜಿಲ್ಲೆಯಲ್ಲಿ ಸಡಿಲಿಕೆ ನೀಡಲಾಗಿದೆ. ಆದರೆ ಅಂತರ್ ಜಿಲ್ಲೆ ವ್ಯಾಪ್ತಿಯಲ್ಲಿ ಓಡಾಟಕ್ಕೆ ನಿರ್ಭಂಧ ಮುಂದುವರೆದಿದೆ. ಜನರ ಓಡಾಟ ಹೆಚ್ಚಾದರೆ ಕಷ್ಟ ಎಂದು ಈ ನಿರ್ಬಂಧ ಮುಂದುವರೆದಿದೆ ಎಂದರು.