ಹಾಸನ : ಕಾವೇರಿ ನಿಗಮ ವ್ಯಾಪ್ತಿಯಲ್ಲಿ 2018-19 ರಲ್ಲಿ 146 ಕಾಮಗಾರಿಗಳಿಗೆ 78 ಕೋಟಿ ರೂ. ಟೆಂಡರ್ ಪ್ರಕ್ರಿಯೆ ನಡೆದಿತ್ತು. ಆದರೆ ಅದನ್ನು ತಡೆ ಹಿಡಿಯಲಾಗಿದೆ ಎಂದು ಶಾಸಕ ಹೆಚ್.ಕೆ. ಕುಮಾರಸ್ವಾಮಿ ತಿಳಿಸಿದರು.
ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿ ಸಿರಗಾವರ ಗ್ರಾಮದಲ್ಲಿ ಸೇತುವೆ ಮತ್ತು ರಸ್ತೆ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಸ್ಥಳೀಯರೇ ಉದ್ಘಾಟಿಸಿದ್ದಾರೆ. ಸಿಎಂ ಯಡಿಯೂರಪ್ಪನವರು ಯಾವುದೇ ಕಾಮಗಾರಿ ಮಾಡಬೇಕಾದರೆ ನನ್ನ ಅನುಮತಿ ಪಡೆಯಬೇಕೆಂದು ಅದೇಶಿಸಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. 2014-15 ರಲ್ಲಿ ಸಿರಗಾವರ ಸೇತುವೆ ಮತ್ತು ರಸ್ತೆ ಕಾಮಗಾರಿ ಮಂಜೂರಾಗಿದ್ದು, 2016-17 ರಲ್ಲಿ ಪ್ರಾರಂಭವಾಗಿ ಕೆಲಸ ಮುಗಿದಿದೆ. ಆದರೂ ಇನ್ನು 90 ಲಕ್ಷ ಕೆಲಸ ಆಗಿಲ್ಲ. ರಸ್ತೆ ಪೂರ್ಣಗೊಂಡಿಲ್ಲ, ಇಬ್ಬರು ಮುಖಂಡರ ಪ್ರಚೋದನೆಯಿಂದ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.
ಕನ್ನಡ ಪರ ಸಂಘಟನೆಗಳು ನಾಳೆ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಲು ಒತ್ತಾಯ ಮಾಡುತ್ತಿದ್ದಾರೆ. ಇದು ಹೊಸ ಬೇಡಿಕೆಯಲ್ಲ, ಕನ್ನಡ ನೆಲ-ಜಲದ ದೃಷ್ಠಿಯಿಂದ ಅವರು ಮಾಡುತ್ತಿರುವ ಹೋರಾಟ. ಇದಕ್ಕೆ ನಮ್ಮ ಬೆಂಬಲವಿದೆ ಎಂದು ತಿಳಿಸಿದರು.