ಹಾಸನ: ಜಿಲ್ಲೆಯ ಅರಸೀಕೆರೆ ತಾಲೂಕಿನ ಮಾಲೆಕಲ್ಲು ತಿರುಪತಿ ಬೆಟ್ಟದ ಮೇಲಿನ ದೇವಾಲಯದ ವಸ್ತು ಸಂಗ್ರಹಾಲಯದಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ನಿನ್ನೆ(ಸೋಮವಾರ) ಮಧ್ಯಾಹ್ನ ನಾಲ್ವರು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.
ಘಟನೆಯ ವಿವರ: ಮೇ 30ರ ಮಧ್ಯಾಹ್ನ ನಾಲ್ವರು ದುಷ್ಕರ್ಮಿಗಳು ಮಾಲೆಕಲ್ಲು ತಿರುಪತಿ ದೇವಾಲಯಕ್ಕೆ ಆಗಮಿಸಿ ಕಲ್ಯಾಣಿಯಲ್ಲಿ ಈಜಾಡಿ ಬಿಸಿಲಿನ ತಾಪ ತಣಿಸಿಕೊಂಡಿದ್ದಾರೆ. ದೇವಾಲಯದ ಆವರಣದಲ್ಲಿಯೇ ಧೂಮಪಾನ ಮಾಡಿ ಅಪವಿತ್ರಗೊಳಿಸಿದ್ದಾರೆ. ಇದನ್ನು ಪ್ರಶ್ನಿಸಿದ ದೇಗುಲದ ಅವರಣದಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಕೂಲಿ ಕಾರ್ಮಿಕರನ್ನು ಹೆದರಿಸಿ ಓಡಿಸಿದ್ದಾರೆ.
ಬಳಿಕ ದೇವಾಲಯದ ವಸ್ತು ಸಂಗ್ರಹಾಲಯಕ್ಕೆ ತೆರಳಿದ ದುಷ್ಕರ್ಮಿಗಳು, ವಸ್ತುಸಂಗ್ರಹಾಲಯದಲ್ಲಿ ನಿರ್ಮಾಣವಾಗುತ್ತಿದ್ದ ಹಾಗೂ ನಿರ್ಮಾಣವಾಗಿದ್ದ ಕೆಲವು ಹಿಂದೂ ದೇವತೆಗಳ ಮೂರ್ತಿಗಳನ್ನು ಮನಸೋ ಇಚ್ಛೆ ಮಾರಕಾಸ್ತ್ರಗಳನ್ನು ಬಳಸಿ ಧ್ವಂಸಗೊಳಿಸಿದ್ದಾರೆ. ಮೂರ್ತಿಗಳನ್ನು ಧ್ವಂಸ ಮಾಡುವ ವೇಳೆ ಅಲ್ಲಿಯೇ ಇದ್ದ ಕೆಲವರು ಗಮನಿಸಿದ್ದು ತಿಳಿಯುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ಸರ್ಪಗಾವಲು: ಪ್ರಕರಣದ ನಡೆದ ಬಳಿಕ ಸ್ಥಳಕ್ಕೆ ಧಾವಿಸಿದ ಹಾಸನದ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸಗೌಡ, ಡಿವೈಎಸ್ಪಿ ಅಶೋಕ್, ವೃತ್ತ ನಿರೀಕ್ಷಕ ವಸಂತ್ ಕುಮಾರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ತೆರಳಿ ದುಷ್ಕರ್ಮಿಗಳು ಸ್ಥಳದಲ್ಲಿ ಬಿಟ್ಟು ಹೋಗಿದ್ದ ಕುರುಹುಗಳನ್ನು ಕಲೆಹಾಕಿದ್ದಾರೆ.
ವಿಚಾರ ತಿಳಿಯುತ್ತಿದ್ದಂತೆ ಅರಸೀಕೆರೆ ನಗರದ ಹಿಂದೂ ಸಂಘಟನೆಗಳು, ಸ್ಥಳೀಯರು ಸೇರಿದಂತೆ ದೇವಸ್ಥಾನದ ಆವರಣದಲ್ಲಿ ನಡೆದಿದ್ದ ಕೃತ್ಯ ನೋಡಲು ಜನಜಂಗುಳಿಯೇ ನೆರೆದಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಪುರಾತನ ದೇವಾಲಯಗಳ ಬೀಡು: ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಪುರಾತನ ಕಾಲದ ಸಾಕಷ್ಟು ದೇವಸ್ಥಾನಗಳಿವೆ. ಹೊಯ್ಸಳ ಕಾಲದ ಶಿವಾಲಯ, ಯಾದಾಪುರ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಬೆಟ್ಟ, ಮಲ್ಲೇಶ್ವರ ಬೆಟ್ಟ, ಗರುಡನಗಿರಿ ಹಾರನಹಳ್ಳಿಯ ಕೋಡಿಮಠ, ಅರಕೆರೆಯ ಚನ್ನಕೇಶವ ಮತ್ತು ರಾಮೇಶ್ವರ ದೇವಾಲಯ, ಲಕ್ಷ್ಮಿಪುರದ ಮಹಾಗಣಪತಿ ದೇವಾಲಯ, ಮಾಡಾಳು ಗೌರಮ್ಮ ಸೇರಿದಂತೆ ಮಾಲೆಕಲ್ಲು ತಿರುಪತಿ ದೇವಾಲಯ ಕೂಡ ಒಂದು. ಇದರ ಜತೆಗೆ ಅರಸೀಕೆರೆ ಪಟ್ಟಣದಿಂದ 11 ಕಿ. ಮೀ ದೂರದಲ್ಲಿರುವ ನಾಗಪುರಿ ಕೋಟೆಯಲ್ಲಿನ ಹೈದರಾಲಿ ಕಟ್ಟಿದ ಕೋಟೆಯ ಅವಶೇಷವಿದೆ. ಹೀಗಾಗಿ ಅರಸೀಕೆರೆ ರಾಜ್ಯದಲ್ಲಿ ತನ್ನದೇ ಆದ ವಿಶೇಷ ಸ್ಥಾನ ಹೊಂದಿದೆ.
ದೇವಾಲಯದ ವಿಶೇಷತೆ ಏನು?: ಮಾಲೆಕಲ್ಲು ತಿರುಪತಿ ಬೆಟ್ಟ ಅರಸೀಕೆರೆಯಿಂದ 2 ಕಿ.ಮೀ ದೂರದಲ್ಲಿದೆ. ಇದನ್ನು ಚಿಕ್ಕತಿರುಪತಿ ಎಂದೇ ಕರೆಯಲಾಗುತ್ತದೆ. ಸಾವಿರಾರು ಮೆಟ್ಟಿಲುಗಳಿರುವ ದೊಡ್ಡ ಬೆಟ್ಟದ ಮೇಲೆ ವೆಂಕಟೇಶ್ವರ ಸ್ವಾಮಿ ಮತ್ತು ಲಕ್ಷ್ಮೀದೇವಿ ನೆಲೆಸಿದ್ದಾರೆ. ಸುಮಾರು 300 ವರ್ಷಗಳ ಇತಿಹಾಸ ಇರುವ ಈ ದೇವಾಲಯದಲ್ಲಿ ಬೆಟ್ಟದ ಕೆಳಗೆ ವಿಸ್ತಾರವಾದ ವೆಂಕಟೇಶ್ವರ ಸ್ವಾಮಿ ದೇವಸ್ಥಾನವಿದೆ. ಪ್ರತಿವರ್ಷ ಇಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ದೇವಾಲಯದ ಆವರಣದಲ್ಲಿ ಬತ್ತದಿರುವ ಕಲ್ಯಾಣಿಯಿದೆ. ಇದನ್ನು ಚಿಕ್ಕ ತಿರುಪತಿ ಎಂದೇ ಕರೆಯಲಾಗುತ್ತದೆ.
ಇದನ್ನೂ ಓದಿ: ಬೆಳಗಾವಿಯ ಶಾಹಿ ಮಸೀದಿ ಈ ಹಿಂದೆ ಮಂದಿರವಾಗಿತ್ತು: ಶಾಸಕ ಅಭಯ್ ಪಾಟೀಲ್