ಗದಗ: ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕೋರಿ ಸೋಮವಾರ ಮುಸ್ಲಿಂ ಸಮುದಾಯದ ಜನರು ಬೃಹತ್ ಪ್ರತಿಭಟನಾ ರ‍್ಯಾಲಿ ಮಾಡಿದರು. ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತರು ಈ ಪ್ರತಿಭಟನಾ ರ‍್ಯಾಲಿ ಆಯೋಜಿಸಿದ್ದರು.
ಶಿಕ್ಷಣದ ಹಕ್ಕು ಎಲ್ಲರಿಗೂ ಸಿಗಲಿ, ಪ್ರತಿಯೊಬ್ಬರೂ ಕಾನೂನನ್ನು ಗೌರವಿಸಲಿ, ಸರ್ಕಾರಿ ಕಚೇರಿಯಲ್ಲಿ ಯಾವುದೇ ಧರ್ಮದ ಆಚರಣೆ ಮಾಡಬಾರದು, ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತದಿರಿ, ಸಮಾನ ಶಿಕ್ಷಣಕ್ಕಾಗಿ ನಮ್ಮ ಹೋರಾಟ ಸೇರಿದಂತೆ ಹಲವು ನಾಮಫಲಕಗಳನ್ನು ಹಿಡಿದು ರ‍್ಯಾಲಿಯಲ್ಲಿ ಪ್ರತಿಭಟನಾನಿರತರು ಸಾಗಿದರು.
ತೋಂಟದಾರ್ಯ ಮಠದಿಂದ ಆರಂಭವಾದ ಈ ರ‍್ಯಾಲಿ ನಗರದ ವಿವಿಧೆಡೆ ಸಂಚರಿಸಿ ನಂತರ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸಮಾವೇಶಗೊಂಡಿತು.
ಈ ವೇಳೆ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಮಾತನಾಡಿ, 'ನಮಗೆ ಹಿಜಾಬ್ ಬೇಕೇ ಬೇಕು. ನಾವು ಹುಟ್ಟಿದಾಗಿನಿಂದ ಹಿಜಾಬ್ ಧರಿಸಿಕೊಂಡು ಬಂದಿದ್ದೇವೆ, ಸಾಯುವವರೆಗೆ ಹಿಜಾಬ್ ಧರಿಸುತ್ತೇವೆ. ಈ ಹಿಂದೆ ನಮ್ಮ ಸೀನಿಯರ್ಸ್, ಸೂಪರ್ ಸೀನಿಯರ್ಸ್ ಸಹ ಹಿಜಾಬ್ ಹಾಕುತ್ತಿದ್ದರು. ಹೀಗಾಗಿ ನಾವೂ ಕೂಡ ಧರಿಸುತ್ತೇವೆ ಎಂದರು.
ಇದನ್ನೂ ಓದಿ: 'ಹಿಜಾಬ್ ವಿವಾದವನ್ನು ವಿದ್ಯಾರ್ಥಿನಿಯರ ಮೂಲಕ ಆಡಿಸುತ್ತಿರುವ ಕೀಲಿಕೈ ಬೇರೆಯೇ ಇದೆ'