ಹಾಸನ: ಹಾಸನದಲ್ಲಿ ಅಶ್ವಿನಿ ಮಳೆಯ ಆರ್ಭಟ ಜೋರಾಗಿತ್ತು. ಸಂಪ್ರದಾಯದಂತೆ ಮೊನ್ನೆ ಮತ್ತು ನಿನ್ನೆ ಎರಡು ದಿನ ಹಾಸನ ಜಿಲ್ಲೆಯ ವಿವಿಧ ಭಾಗದಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗುವ ಮೂಲಕ ರೈತಾಪಿ ವರ್ಗದಲ್ಲಿ ಹರ್ಷವನ್ನುಂಟು ಮಾಡಿದೆ.
ಹಿಂದುಗಳ ಪ್ರಕಾರ ಯುಗಾದಿಯನ್ನೇ ಹೊಸ ವರ್ಷವೆಂದು ಕರೆಯಲಾಗಿದೆ. ಯುಗಾದಿ ಹಬ್ಬದಂದು ಹೊನ್ನಾರು ಕಟ್ಟಿದ ಬಳಿಕ ಕೃಷಿ ಚಟುವಟಿಕೆಗಳಿಗೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ. ಚಾಂದ್ರಮಾನ ಯುಗಾದಿ ಮರುದಿನವೇ ಸೌರಮಾನ ಯುಗಾದಿ ಬಂದಿದ್ದು ಈ ವರ್ಷದ ವಿಶೇಷ. ಪ್ಲವನಾಮ ಸಂವತ್ಸರದ ಈ ವರ್ಷದಲ್ಲಿಯೂ ಕೂಡ ಮುಂಗಾರು ಮತ್ತು ಹಿಂಗಾರು ಮಳೆ ರೈತಾಪಿ ವರ್ಗಕ್ಕೆ ಅನುಕೂಲ ಮಾಡಿಕೊಡುತ್ತದೆ ಎಂಬ ಪಂಚಾಂಗದ ಪ್ರಕಾರ ಮೊನ್ನೆ ಮತ್ತು ನಿನ್ನೆ ಹಾಸನ ಜಿಲ್ಲೆಯ ವಿವಿಧೆಡೆ ಭರ್ಜರಿ ಮಳೆಯಾಗುತ್ತಿದ್ದು, ರೈತಾಪಿ ವರ್ಗದವರು ಫುಲ್ ಖುಷ್ ಆಗಿದ್ದಾರೆ.
ಯುಗಾದಿ ಹಬ್ಬದ ಮಾರನೆದಿನ ಸಾಮಾನ್ಯವಾಗಿ ಬಾಡೂಟ ಮಾಡುವ ಸಂಪ್ರದಾಯವಿದೆ. ನಿನ್ನೆ ಮಳೆಯಾಗಿರುವುದರಿಂದ ರೈತರು ಇಂದಿನಿಂದ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಈ ವರ್ಷ ಪ್ರತೀತಿಯಂತೆ ಮಳೆಯಾದರೆ ರೈತರ ಕೃಷಿ ಜಮೀನು ಹಸಿರಾಗಿ ಕಾಣುವ ಜೊತೆಗೆ ಮುಂದಿನ ವರ್ಷಗಳಲ್ಲಿ ರೈತರ ಬೊಕ್ಕಸಕ್ಕೆ ಆದಾಯ ತರುವುದರಲ್ಲಿ ಎರಡು ಮಾತಿಲ್ಲ.