ಹಾಸನ: ಜೂನ್ 22ರಿಂದ ಪ್ರಾರಂಭವಾಗಿರುವ ಆರಿದ್ರ ಮಳೆ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿದೆ. ಹಾಸನ ನಗರ, ಹಳೇಬೀಡು ಬೇಲೂರು ಮತ್ತು ಶ್ರವಣಬೆಳಗೊಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ.
ಹಳೇಬೀಡಿನ ತರಗಿನ ಪೇಟೆಯ ಲಕ್ಷ್ಮಮ್ಮ ಎಂಬ ವೃದ್ಧೆಯ ಮನೆಗೆ ಚರಂಡಿ ನೀರು ನುಗ್ಗಿ ಅವಾತಂರ ಸೃಷ್ಟಿಸಿತ್ತು. ಸ್ಥಳೀಯರು ಆಗಮಿಸಿ ಕಟ್ಟಿಕೊಂಡಿದ್ದ ತ್ಯಾಜ್ಯ ವಸ್ತುಗಳನ್ನು ಹೊರತೆಗೆದು ನೀರು ಹರಿಯುವಂತೆ ಮಾಡುವ ಮೂಲಕ ವೃದ್ಧೆಯ ನೆರವಿಗೆ ಧಾವಿಸಿದರು.
ಕಳೆದ ವರ್ಷ ಪ್ರವಾಹದಿಂದ ತತ್ತರಿಸಿದ ಜನತೆಗೆ, ಈ ವರ್ಷವೂ ಕೂಡ ಆರಿದ್ರ ಮಳೆ ರೈತರ ಬಾಳಲ್ಲಿ ಚೆಲ್ಲಾಟವಾಡಿದೆ. ವಾಣಿಜ್ಯ ಬೆಳೆ ಆಲೂಗಡ್ಡೆ ಮೇಲೆ ಆರಿದ್ರಾ ಮಳೆಯ ಸ್ಪರ್ಶವಾಗಿರುವುದು ಚಿಗುರೊಡೆಯುವ ಮುನ್ನವೇ ಮೊಳಕೆಯನ್ನು ಚಿವುಟಿದಂತಾಗಿದೆ. ಈ ಬಾರಿಯಾದರೂ ಆದಾಯ ತೆಗೆದುಕೊಳ್ಳಬೇಕೆಂಬ ತವಕದಲ್ಲಿದ್ದ ರೈತನಿಗೆ ಮತ್ತಷ್ಟು ಸಂಕಷ್ಟವನ್ನು ತಂದೊಡ್ಡಿದೆ.
ಶ್ರವಣಬೆಳಗೊಳದಲ್ಲಿ ಸುರಿದ ಮಳೆಯಿಂದ ಬೀದಿಬದಿ ವ್ಯಾಪಾರಿಗಳು ಸಂಕಷ್ಟ ಎದುರಿಸಿದರು. ಮಳೆಯಿಂದ ರಸ್ತೆ ಬದಿಯಲ್ಲಿ ಹಾಕಿದ್ದ ತರಕಾರಿ ಸೇರಿದಂತೆ ಇನ್ನಿತರ ವಸ್ತುಗಳು ಮಳೆಯಿಂದ ಹಾಳಾಗಿವೆ. ಇದಲ್ಲದೆ ಬೇಲೂರಿನ ತರಕಾರಿ ಮಾರುಕಟ್ಟೆಯಲ್ಲಿ ಹಾಕಲಾಗಿದ್ದ ಮಾವಿನ ಹಣ್ಣುಗಳು ಕೂಡ ನೀರಿನಲ್ಲಿ ಕೊಚ್ಚಿ ಹೋಗಿವೆ.