ಹಾಸನ : ಜಿಲ್ಲೆಯಾದ್ಯಂತ ವರುಣನ ಅಬ್ಬರ ಜೋರಾಗಿದೆ. ಕಳೆದೊಂದು ವಾರದಿಂದ ಎಡಬಿಡದೆ ಸುರಿಯುತ್ತಿದೆ. ಈ ಹಿಂದೆ ಇಲ್ಲಿನ ಬೇಲೂರಿನ ಯಗಚಿ ಜಲಾಶಯ ಭರ್ತಿಯಾಗಿತ್ತು. ಇದರ ಬೆನ್ನಲ್ಲೆ ಕಾವೇರಿ ಜಲಾನಯನ ಪ್ರದೇಶವಾಗಿರುವ ಅರಕಲಗೂಡು ತಾಲೂಕಿನ ಕಟ್ಟೇಪುರ ಸೇತುವೆ ಕೂಡ ಮುಳುಗಡೆಯಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಬ್ರಿಟಿಷರ ಕಾಲದಲ್ಲಿ ಕಟ್ಟಿದ ಕಟ್ಟೇಪುರ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.
ರಾಮನಾಥಪುರ ಮತ್ತು ಕೊಣನೂರು ಬಳಿ ಹಾದು ಹೋಗುವ ಕಾವೇರಿ ನದಿ ದಡದಲ್ಲಿರುವ ನಾಲ್ಕು ಗ್ರಾಮಗಳನ್ನು ಸಂಪರ್ಕಿಸುವ ತೂಗುಸೇತುವೆ ಕೂಡ ಮುಳುಗುವ ಹಂತ ತಲುಪಿದ್ದು, ಜನತೆ ಆತಂಕದಲ್ಲಿದ್ದಾರೆ.
ನಿನ್ನೆಯಿಂದ ಸುರಿಯುತ್ತಿರುವ ಮಳೆಗೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತವಾಗಿದೆ. ದೋಣಿಗಲ್ ಸಮೀಪ ವಾಹನಗಳು ಸಾಲುಗಟ್ಟಿ ನಿಂತು ಸಂಚಾರಕ್ಕೆ ಅಡಚಣೆಯಾಗಿದೆ. ಅಲ್ಲದೆ ರೈತರ ಜಮೀನಿಗೆ ಮಣ್ಣು ನುಗ್ಗಿ 20 ಎಕರೆ ಕೃಷಿ ಭೂಮಿ ಹಾನಿಯಾಗಿದೆ.
ಮೆಣಸು, ಕಾಫಿ ಬೆಳೆಗಳು ಮಣ್ಣು ಪಾಲಾಗಿವೆ. ಕೃಷಿ ಭೂಮಿಯಲ್ಲಿ ಸುಮಾರು 4 ಅಡಿಯಷ್ಟು ಮಣ್ಣು ನಿಂತಿದೆ. ಎತ್ತಿನಹೊಳೆ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಂದಲೇ ಈ ರೀತಿ ಅವಗಢ ಸಂಭವಿಸುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಇದನ್ನೂ ಓದಿ: ಆರ್ಟಿಐ ಕಾರ್ಯಕರ್ತ ಶ್ರೀಧರ್ ಕೊಲೆ ಪ್ರಕರಣ: ಆರೋಪಿಯ ಬಂಧನ