ಹಾಸನ: ಅರಕಲಗೂಡು ತಾಲೂಕು ಕಚೇರಿಗೆ ಹಾಸನ ಜಿಲ್ಲಾ ಎಂಎಲ್ಸಿಗಳಾದ ಗೋಪಾಲ ಸ್ವಾಮಿ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಾವಗಲ್ ಮಂಜುನಾಥ್ ಆಗಮಿಸಿ ಕ್ಷೇತ್ರದ ಶಾಸಕರಾದ ಎ.ಟಿ.ರಾಮಸ್ವಾಮಿ ಮತ್ತು ತಹಿಶೀಲ್ದಾರ್ ರೇಣುಕುಮಾರ್, ಆರೋಗ್ಯ ಅಧಿಕಾರಿಗಳಾದ ಸ್ವಾಮಿಗೌಡರವರು ಕೆಲವು ಮುಖ್ಯ ಅಧಿಕಾರಿಗಳೊಂದಿಗೆ ಕೊರೊನಾ ಸಂಬಂಧ ಸಭೆ ನಡೆಸಿದರು.
ಅರಕಲಗೂಡು ತಾಲೂಕಿನಲ್ಲಿ ಬೆಳೆದ ಕೆಲವು ತರಕಾರಿ ಹಣ್ಣುಗಳು ಇಲ್ಲಿಯೇ ಮಾರಾಟವಾಗುತ್ತಿವೆ. ಕೆಲವು ತರಕಾರಿಗಳಾದ ಸಿಹಿಕುಂಬಳ, ಎಲೆ ಕೋಸು, ಹೂ ಕೋಸುಗಳಂತ ತರಕಾರಿಗಳನ್ನು ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಬೇಕು. ಅಥವಾ ಸರ್ಕಾರ ಬೆಂಬಲ ನೀಡಿ ಖರೀದಿ ಮಾಡಬೇಕಾಗಿದ್ದು, ಸಾಗಣೆ ವಾಹನಗಳಲ್ಲಿ ಚಾಲಕ ಮತ್ತು ಕ್ಲೀನರ್ ಇಬ್ಬರಿಗೆ ಅವಕಾಶ ನೀಡಬೇಕು. ಮತ್ತು ಸರ್ಕಾರ ಇದಕ್ಕಾಗಿ ತಾಲೂಕಿಗೆ 25 ಲಕ್ಷ ರೂಪಾಯಿ ಅನುದಾನ ನೀಡಬೇಕೆಂದು ಸಭೆಯಲ್ಲಿ ಚರ್ಚೆ ನಡೆಸಿದರು.
ಗೋಪಾಲ ಸ್ವಾಮಿ ಮತ್ತು ಮಂಜುನಾಥ್ ಅವರು ಅರಕಲಗೂಡು ಕೋಟೆ ಕೊತ್ತಲು ಗಣಪತಿ ಆವರಣದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ನೇತೃತ್ವದಲ್ಲಿ ಬಡವರಿಗೆ, ನಿರ್ಗತಿಕರಿಗೆ ಆಹಾರ ಕಿಟ್ ನೀಡಿದರು. ಬಳಿಕ ಜಾವಗಲ್ ಮಂಜುನಾಥ್ ಮಾತನಾಡಿ, ಈ ದಿನ ಅರಕಲಗೂಡು ತಾಲೂಕಿನ ಬಡವರಿಗೆ ಈ ದಿನಬಳಕೆ ಆಹಾರ ಕಿಟ್ಅನ್ನು ನಮ್ಮ ಕಾಂಗ್ರೆಸ್ ಪಕ್ಷದ ಹಿರಿಯರಾದ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ಕರೆಯ ಮೇರೆಗೆ ಜಿಲ್ಲೆಯಾದ್ಯಂತ ಕೊಡುತ್ತಿದ್ದೇವೆ. ಈ ಕೊರೊನಾ ಮಹಾಮಾರಿ ಇನ್ನು ಎಷ್ಟು ದಿನ ಇರುತ್ತೊ ಗೊತ್ತಿಲ್ಲ. ಅದರ ವಿರುದ್ಧ ನಾವೆಲ್ಲರೂ ಹೋರಾಡಬೇಕಾಗಿದೆ. ಜನರ ಪ್ರಾಣ ಉಳಿಸಲು ನಮ್ಮ ಕೈಲಾದ ಸಹಾಯ ಮಾಡುತ್ತೇವೆ ಎಂದರು.
ಗೋಪಾಲಸ್ವಾಮಿ ಮಾತನಾಡಿ, ಈ ಕೊರೊನಾ ಮಹಾಮಾರಿಯನ್ನು ಓಡಿಸಲು ಸರ್ಕಾರದ ಜೊತೆ ನಾವೆಲ್ಲರೂ ಶ್ರಮಿಸಬೇಕು. ಲಾಕ್ ಡೌನ್ ಯಶಸ್ವಿಗೊಳಿಸಬೇಕು. ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸಲು ಸರ್ಕಾರ ಕೆಲವು ನಿಬಂಧನೆಗಳನ್ನು ಜಾರಿಗೊಳಿಸಿದೆ. ಕೈಗಾರಿಕೆ, ಕೃಷಿ, ನೀರಾವರಿ, ಕಾಮಗಾರಿಗಳಿಗೆ, ಕೆಲವು ಅಂಗಡಿ ಮುಂಗಟ್ಟುಗಳಿಗೆ ಸಡಿಲಿಕೆ ನೀಡಿದೆ. ಅದನ್ನು ಉಪಯೋಗಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು ರೈತರು ಕೃಷಿ ಮಾಡಲಿ. ರೈತರ ಪರವಾಗಿ ನಾವು ಸರ್ಕಾರಕ್ಕೆ ಒತ್ತಾಯ ತಂದು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದರು.