ಹಾಸನ: ಜಿಲ್ಲೆಯಲ್ಲಿ ಬಿತ್ತನೆ ಆಲೂಗೆಡ್ಡೆ ಸಂಪೂರ್ಣ ನಾಶವಾಗಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಹಾಗೆಯೇ ಹಾಸನದಿಂದ ಬೆಂಗಳೂರು, ಮಂಗಳೂರು, ಮೈಸೂರು ಎಲ್ಲಾ ಭಾಗಗಳಿಗೂ ರೈಲು ಸಂಚಾರ ಪುನರಾರಂಭಿಸಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿತ್ತನೆ ಮಾಡಿದ ಆಲೂಗೆಡ್ಡೆ ಭೂಮಿಯಲ್ಲಿಯೇ ಕೊಳೆತು ಹೋಗುತ್ತಿದೆ. ಯಾವ ಯಾವ ತಾಲೂಕಿನಲ್ಲಿ ಎಷ್ಟೆಷ್ಟು ನಾಶವಾಗುತ್ತಿದೆ ಎಂಬುದರ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸಬೇಕು. ಅದರ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ವರದಿ ಕಳುಹಿಸಬೇಕು ಎಂದರು.
ಬಡವರು ಹೋಗಿ ಬರಲು ಕೂಡಲೇ ರೈಲು ಸಂಚಾರ ಆರಂಭಿಸಬೇಕು. ಹಾಸನ ಜಿಲ್ಲೆಯ ಹಿತದೃಷ್ಟಿಯಿಂದ ಕೇಂದ್ರ ರೈಲ್ವೆ ಸಚಿವರಿಗೆ ಸಂಸದರು ಮತ್ತು ನಾವು ಪತ್ರ ಬರೆಯಲಾಗುವುದು ಎಂದರು.
ಬಡವರಿಗೆ ಕಡಿಮೆ ಬೆಲೆಯಲ್ಲಿ ನಿವೇಶನ ಸಿಗುವಂತಾಗಬೇಕು. 100ರ ಪೈಕಿ ಶೇ.50 ಭಾಗವನ್ನು ರೈತರಿಗೆ ಬಿಟ್ಟುಕೊಡಬೇಕು. ಸಂಬಂಧಪಟ್ಟ ಮಂತ್ರಿ ಮತ್ತು ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದು ಹುಡಾ ಕಚೇರಿಯಲ್ಲಿ ನಿವೇಶನಕ್ಕಾಗಿ ಅರ್ಜಿ ಕೊಡುತ್ತಿರುವ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಲೂಕು, ಹೋಬಳಿ ಮಟ್ಟದಲ್ಲಿ ಪಂಚಾಯಿತಿಯಲ್ಲಿ ಎರಡೆರಡು ಶಾಲೆ ತೆರೆದರೇ ಸರ್ಕಾರಿ ಶಾಲೆಗಳೂ ಉಳಿಯುತ್ತವೆ. ಜೊತೆಗೆ ಖಾಸಗಿ ಶಾಲೆಗಳ ಹೊಡೆತದಿಂದ ತಪ್ಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರದಲ್ಲಿ ಇದ್ದಿದ್ದರೇ ಖಂಡಿತವಾಗಿಯೂ 3 ಸಾವಿರ ಆಂಗ್ಲ ಮಾಧ್ಯಮದ ಶಾಲೆಗಳನ್ನು ತೆರೆಯುತ್ತಿದ್ದರು ಎಂದರು.
ಬಿ.ಎಸ್.ಯಡಿಯೂರಪ್ಪ ಅವರ ಮುಖ್ಯಮಂತ್ರಿ ಅವಧಿ ಮುಗಿಯುವುದರೊಳಗೆ ಸರ್ಕಾರಿ ಶಾಲೆಗಳು ಮುಚ್ಚಲಿದೆ ಎಂದು ಟೀಕಿಸಿದರು. ಹಾಸನದ ರೈಲ್ವೆ ಮೇಲು ಸೇತುವೆ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ಚುರುಕಾಗಿ ನಡೆಸಲು ರೈಲ್ವೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ತಿಳಿಸಿದರು.