ಹಾಸನ: ನೆರೆ ಸಂತ್ರಸ್ತರ ಸಂಕಷ್ಟ ದೂರ ಮಾಡಲಿ ಹಾಗೂ ಜೆಡಿಎಸ್ಗೆ ಮತ್ತೊಮ್ಮೆ ರಾಜ್ಯದ ಜನರ ಸೇವೆ ಮಾಡಲು ಅವಕಾಶ ಸಿಗಲೆಂದು ಪ್ರಾರ್ಥಿಸಿ ಹಾಸನಾಂಬೆಗೆ ಪೂಜೆ ಸಲ್ಲಿಸಿರುವುದಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.
ಇತಿಹಾಸದ ಪ್ರಸಿದ್ಧ ದೇವಾಲಯಕ್ಕೆ ಆಗಮಿಸಿದ ಹೆಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ ಹಾಗು ಪುತ್ರ ಪ್ರಜ್ವಲ್ ರೇವಣ್ಣ ಅಧಿದೇವತೆಯ ದರ್ಶನ ಪಡೆದರು.
ದೇವಿಯ ಉತ್ಸವದ ಆಹ್ವಾನ ಪತ್ರಿಕೆಯಲ್ಲಿ ಸಂಸದರ ಹೆಸರನ್ನು ಕೈಬಿಟ್ಟಿರುವುದು ಬೇಸರ ತಂದಿದೆ. ಈ ರೀತಿ ದ್ವೇಷದ ರಾಜಕಾರಣ ಮಾಡಬಾರದು. ಎಲ್ಲರನ್ನೂ ಪ್ರೀತಿ, ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಸಾ.ರಾ.ಮಹೇಶ್ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ, ಈಗಾಗಲೇ ಪಕ್ಷದ ವರಿಷ್ಠರ ಮನವೊಲಿಸಿದ್ದು, ಆಣೆ ಪ್ರಮಾಣದ ಅವರ ವೈಯಕ್ತಿಕ ವಿಚಾರ ಎಂದರು.
ಹಾಸನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆಯಲು ನಾನೊಬ್ಬಳೆ ಕಾರಣ ಎಂದು ನಾನು ಹೇಳಿಲ್ಲ. ರೇವಣ್ಣರಿಂದ ಆಗಿರುವುದಾಗಿಯೂ ಹೇಳಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾದ ಮಾಧುಸ್ವಾಮಿ ಹೇಳಿಕೆ ನೀಡುವ ಮುನ್ನ ತಿಳಿದುಕೊಂಡು ಮಾತನಾಡಲಿ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ತಿರುಗೇಟು ನೀಡಿದ್ದಾರೆ.